ಆಯಿಯ ದೋಸೆ
ಅದು ಬಾಲ್ಯದ ದಿನಗಳು. ಬೇಸಿಗೆ ರಜೆ ಬಂತೆಂದರೆ ಅಜ್ಜನ ಮನೆಗೆ ಓಡುತ್ತಿದ್ದ ದಿನವದು. ಉತ್ತರ ಕನ್ನಡದ “ಚಪ್ಪರಮನೆ” ಅಂತಾ ಊರಿನ ಹೆಸರು. ಯಕ್ಷಗಾನದಿಂದ, ಮಾವನ ಭಾಗವತಿಕೆಯಿಂದ ಆ ಊರು ಪರಿಚಿತ ಅನ್ನೋದು ಬಿಟ್ಟರೆ ಅದಿಲ್ಲವಾದರೆ ಇವತ್ತಿಗೂ ಆ ಊರು ಒಂತರಹ ಭಯಾನಕ ಕೊಂಪೆಯೇ ಸರಿ! ಸಿದ್ದಾಪುರ ಸೀಮೆಯೆಂದರೆ ನಮ್ಮ ಸಾಗರದವರಿಗೆ ಒಂತರಹ ಮೂದಲಿಕೆ! ಅವರು ಸಾಗರ ಸೀಮೆಯವರ ಲೆಕ್ಕದಲ್ಲಿ ಗೊಡ್ಡುಗಳಂತೆ!(ನನ್ನ ಅಪ್ಪ ಅಮ್ಮನಿಗೆ ಬೈಯ್ಯುತ್ತಿದ್ದಾಗ ನನಗೆ ಈ ವಿಚಾರ ಗೊತ್ತಾಗಿದ್ದು!)ನಮಗೆಲ್ಲಾ ಅದು ಅಜ್ಜನ ಮನೆ ಅನ್ನೋದಕ್ಕಿಂತ ಆಯಿ ಮನೆ ಅಂತಲೇ ಚಿರಪರಿಚಿತ. ಬೆಳಿಗ್ಗೆ ೬.೩೦ ಅಂದರೆ ನನ್ನಗೊಂತು ರಜೆಯಲ್ಲಿ ಮದ್ಯರಾತ್ರಿಯೇ ಸರಿ! ಮಾಣಿ ಆಸ್ರಿಗಾತು ಏಳೋ ಅಂತಾ ಆಯಿ ಎಬ್ಬಿಸುತ್ತಿದ್ದಳು. ಅದೇ ದರಿದ್ರ ದೋಸೆ. ಅಮೆ, ಸೂತಕದಂತ ಅನಿಷ್ಟದ(ನನ್ನ ಲೆಕ್ಕದಲಲ್ಲ) ದಿನ ದೇವರ ಮುಡಿಗೆ ಹೂವು ತಪ್ಪಬಹುದು ಆದರೆ ಈ ಸಿದ್ದಾಪುರ ಸೀಮೆಯಲ್ಲಿ ಆರೂವರೆಗೆ, ದೋಸೆ ತಿನ್ನೋದು ಮಾತ್ರ ೩೬೫ದಿನವೂ ತಪ್ಪದು ಅಂತಾ ನನ್ನ ಗಲಾಟೆ. ಆ ಗಲಾಟೆ ಕೇಳಲಾರದೆ ಕೆಲ ದಿನ ಆಯಿ ನನಗೆ ಬೇರೆ ತಿಂಡಿ ಮಾಡಿ ಹಾಕುತ್ತಿದ್ದಳು. ನಿನ್ನೆ ಅದ್ಯಾಕೋ ನೆನಪಿಗೆ ಬಂತು. ನಾನು ದೋಸೆ ತಿನ್ನದೆ ಸುಮಾರು ಒಂದುವರೆ ವರ್ಷಗಳೇ ಕಳೆದಿರಬೇಕು. ಅಜ್ಜನ ಮನೆಗೆ ಹೋಗದೆ ೨ ವರ್ಷಗಳೇ ಕಳೆದಿದೆ ಬಿಡಿ! ಆಯಿ ಕೈ ದೋಸೆ ತಿನ್ನದೆ ೫ ವರ್ಷಗಳು ಕಳೆದಿವೆ. ಆಯಿ ದೂರ ನಡೆದು ೫ ವರ್ಷವಾಗಿದೆ. ಬಾಲ್ಯ ಕಳೆಯಿತೆಂದರೆ ಸಂಬಂಧಗಳು ಕಳೆದು ಬಿಡುತ್ತವೆ. ಕಳೆಯುತ್ತದೆ ಅನ್ನೋದಕ್ಕಿಂತ ಬೆಳೆಸಿಕೊಂಡು ಹೋಗಲು ನಮಗೆ ಪುರುಸೊತ್ತು ಇರೋಲ್ಲ!ಅನ್ನಿಸಿದ್ದು ಮನೆ ಬಿಟ್ಟು ಓದಲು ಹೊರಗಡೆ ಬಂದ ನಂತರ. ಮನೆಯಲ್ಲಿದ್ದಾಗ ರಜೆಯಲ್ಲಿ ಅಜ್ಜನ ಮನೆಗೆ ಹೊಗೋದು ರೂಢಿ. ಮನೆ ಬಿಟ್ಟ ನಂತರ ರಜೆಯಲ್ಲಿ ಮನೆ ಸೇರಿದರೆ ಸಾಕು ಅಂತಾ ಉದ್ಯೋಗ ಸೇರಿದ ನಂತರ ಅದನ್ನು ಸೇರುವುದು ಕಷ್ಟವೇ!ಯಾಕೋ ನೆನಸಿಕೊಂಡರೆ ಬೇಜಾರಾಗತ್ತೆ. ಇನ್ನೂ ಒಂದು ಶಾಕ್ ಅಂದ್ರೆ ಆ ಆಯಿಗೂ ಅಜ್ಜನ ಮನೆಗೂ ಇರುವ ಸಂಬಂಧವೇನೂ ಎಂಬುದು ಇವತ್ತಿಗೂ ನನಗೆ ಗೊತ್ತಿಲ್ಲ. ಅಜ್ಜನ ಅಕ್ಕನೋ ,ತಂಗಿಯೋ ಆಕೆ. ಮಕ್ಕಳಿಲ್ಲದ ಅವಳು ಗಂಡ ಸತ್ತ ಮೇಲೆ ಇಲ್ಲೇ ಬಂದಿದ್ದಾಳೆ ಅಂತಾ ಅಮ್ಮ ಹೇಳಿದ ನೆನಪು. ಆಕೆಯ ಪ್ರೀತಿ ಮಾತ್ರ ಗೊತ್ತು ಬಿಟ್ಟರೆ ನಿಜಕ್ಕೂ ನನಗೆ ಆಯಿಯ ಪೂರ್ವಾಪರ ಗೊತ್ತಿಲ್ಲ. ಅದನ್ನು ಕೆದಕಿ ತಿಳಿದುಕೊಳ್ಳಬೇಕು ಅಂತಾನೂ ಅನ್ನಿಸಲಿಲ್ಲ. ದೋಸೆ ನೆನಸಿಕೊಂಡಗಲೆಲ್ಲಾ ಆಯಿ ನೆನೆಪಾಗುತ್ತಾಳೆ. ಆಯಿ ಜೊತೆ ಹೊಡೆದ ಜಗಳ ನೆನಪಾಗುತ್ತದೆ. ಈಗ ಅತ್ತೆ ಆಯಿ ದೊಸೆ ಮಾಡಿ ಹಾಕ್ತಿ ಬಾರೋ ಮಾಣಿ ಅಂತ ಕರೆದರೂ ಹೋಗ್ಲಿಕ್ಕೆ ಆಗ್ತಾ ಇಲ್ಲ. ಅತ್ತೆ ಆಯಿ ಹಾಗಲ್ಲ. ಅತ್ತೆ ಮನೆ ದೋಸೆ ಆಗೋವಾಗ ಬೆಳಿಗ್ಗೆ ಏಳೂವರೆಯೇ ಕಳೆದಿರುತ್ತದೆ. ಅತ್ತೆ ಈಗಿನ ಕಾಲದವಳು. ಆದ್ರೂ ಬ್ಲಾಗ್ ಓದಬಹುದಾದಷ್ಟರ ಮಟ್ಟಿಗಿನ ಇಂದಿನ ಕಾಲದವಳಲ್ಲ ಅನ್ನೋ ಭರವಸೆಯಿದೆ. ಹಾಗಾಗಿಯೇ ಆಕೆ ಬಗ್ಗೆನೂ ಒಂಚೂರು ಬರೆದೆ!
Categories: ಕ್ರಿಯೇಟಿವ್ ಪೇಜ್
0 responses so far ↓
There are no comments yet...Kick things off by filling out the form below.