Feeds:
Posts
Comments

ಸದನದಲ್ಲಿ ಸಚಿವರು ಅಶ್ಲೀಲ ಚಿತ್ರ ವೀಕ್ಷಿಸಿದ ಘಟನೆಯ ಕಾವು ತಣಿದಿದೆ. ಹಾಗಂತ ಮಾಧ್ಯಮಗಳಲ್ಲಿ ಆ ದೃಶ್ಯವನ್ನು ಮರುಪ್ರಸಾರ ಮಾಡುವುದು ನಿಂತಿಲ್ಲ. ಈಗಾಗಲೇ ಹುಟ್ಟಿಕೊಂಡಿರುವ ಜೋಕ್‌ನಂತೆ ನಮ್ಮ ದೃಶ್ಯಮಾಧ್ಯಮಗಳು ಸವದಿ ವೀಕ್ಷಿಸಿದ ೨ ನಿಮಿಷದ ವೀಡಿಯೊವನ್ನು ಕಾಲು-ಬಾಲು ಸೇರಿಸಿ ರಾಜ್ಯದ ೧೨ ಕೋಟಿ ಜನತೆಗೆ, ೧೨ ತಾಸುಗಳ ಕಾಲ ಉಣಬಡಿಸಿವೆ. ಇಲ್ಲಿ ಸಚಿವರ ಜೊತೆ, ಘಟನೆಯನ್ನು ಮಾಧ್ಯಮಗಳು ನಿರ್ವಹಿಸಿದ ರೀತಿಯೂ ಬಹುಮುಖ್ಯವಾಗುತ್ತದೆ. ರಾಷ್ಟ್ರೀಯ ವಾಹಿನಿಗಳೂ ವೀಡಿಯೊವನ್ನು ಸಂಪೂರ್ಣವಾಗಿ ಬ್ಲರ್ ಮಾಡಿ ಬಿತ್ತರಿಸಿದವು. ಆದರೆ ನಮ್ಮ ಕನ್ನಡದ ವಾಹಿನಿಗಳು ಸವದಿ ನೋಡಿದ ವೀಡಿಯೊದ ಮೂಲ ತುಣಕನ್ನು ಪ್ರದರ್ಶಿಸಿ ಸಾಮರ್ಥ್ಯ ಮೆರೆದವು. ಸವದಿ, ನೋಡಿದ್ದು, ಹೇಳಿದ್ದು, ನೋಡದೇ ಉಳಿದ್ದಿದ್ದು ಎಲ್ಲವನ್ನೂ ಬಿತ್ತರಿಸಿದವು!

ಸಾರ್ವಜನಿಕ ವಾಹಿನಿಗಳು ಈ ಪರಿ ಕೀಳುಮಟ್ಟಕ್ಕೆ ಇಳಿಯಬಹುದಾ ಎಂದರೆ, ತಕ್ಷಣ ವಾಹಿನಿಗಳಿಂದ ಬರುವ ಉತ್ತರ ಟಿಆರ್‌ಪಿ. ಟೆಲಿವಿಷನ್ ರೇಟಿಂಗ್ ಪಾಯಿಂಟ್ ಅನ್ನುವ ಮಾಯಾಜಿಂಕೆ ದೃಶ್ಯಮಾಧ್ಯಮವನ್ನು ಆಳುತ್ತಿದೆ. ಎಷ್ಟು ಜನ ನಮ್ಮ ವಾಹಿನಿ ನೋಡಿದರು ಎಂಬುದನ್ನು ಸೂಚಿಸುವ ಈ ರೇಟಿಂಗ್, ಜಾಹೀರಾತು ದೃಷ್ಟಿಯಿಂದ ವಾಹಿನಿಗಳಿಗೆ ಅಗತ್ಯ. ಹೆಚ್ಚು ರೇಟಿಂಗ್ ಇರುವ ವಾಹಿನಿಗೆ ಹೆಚ್ಚು ಜಾಹೀರಾತು ಸಹಜವಾಗಿಯೇ ಬರುತ್ತೆ. ಹೀಗಾಗಿಯೇ ಪ್ರತಿ ವಾಹಿನಿ ನಂಬರ್ ಒನ್ ಪಟ್ಟಕ್ಕಾಗಿ ಗುದ್ದಾಟ ನಡೆಸುವುದು. ಇವತ್ತು ಮಾಧ್ಯಮ ಉದ್ಯಮವಾಗಿದೆ. ಇಲ್ಲಿ ಬರುವ ಲಾಭವನ್ನೇ ಮಾಲೀಕರು ಕೇಳುತ್ತಾರೆ. ಆದರ್ಶ, ಸಮಾಜ ಸೇವೆ..ಇವೆಲ್ಲವೂ ಹುಚ್ಚುತನ.

ಕಳೆದ ೬ ತಿಂಗಳಿನಿಂದ ನಾನು ಪ್ರತಿ ವಾರ ಟಿಆರ್‌ಪಿ ವೀಕ್ಷಿಸುತ್ತಿದ್ದೇನೆ. ಕನ್ನಡದಲ್ಲಿ ಟಿಆರ್‌ಪಿ ಆಧಾರದಲ್ಲಿ ಟಿವಿ೯ ನಂಬರ್ ಒನ್ ವಾಹಿನಿ. ೬ ತಿಂಗಳ ಹಿಂದೆ ೨೬೦-೨೮೦ ಪಾಯಿಂಟ್‌ನಲ್ಲಿದ್ದ ವಾಹಿನಿ, ಈ ವಾರ ೧೬೫ ಪಾಯಿಂಟ್‌ಗೆ ಬಂದು ನಿಂತಿದೆ. ಇನ್ನು ದ್ವಿತೀಯ ಸ್ಥಾನದಲ್ಲಿ ಸುವರ್ಣ ನ್ಯೂಸ್ ನಿಂತಿದೆ. ೬ ತಿಂಗಳ ಹಿಂದೆ ೮೫-೯೫ ಪಾಯಿಂಟ್‌ನಲ್ಲಿದ್ದ ವಾಹಿನಿ ಇವತ್ತು ೪೫ಕ್ಕೆ ಬಂದು ನಿಂತಿದೆ. ಜನಶ್ರಿ, ಸಮಯ, ಕಸ್ತೂರಿ ನ್ಯೂಸ್‌ಗಳು ೨೦-೩೦ರ ಗಡಿಯಿಂದ ಮೇಲೇಳುತ್ತಿಲ್ಲ. ಹಾಗೆ ನೋಡಿದ್ರೆ ಕಳೆದ ೬ ತಿಂಗಳಲ್ಲಿ ಸುದ್ದಿವಾಹಿನಿ ನೋಡುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ.

ನಾವು ಮೊದಲು ಸುದ್ದಿ ಕೊಟ್ಟೆವು, ನಾವು ಅತ್ಯಂತ ವೇಗವಾಗಿ ಸುದ್ದಿಕೊಟ್ಟೆವು, ನಾವು ಬ್ರೇಕಿಂಗ್ ನ್ಯೂಸ್ ಕೊಟ್ಟೆವು…ಇವೆಲ್ಲ ದೃಶ್ಯಮಾಧ್ಯಮದಲ್ಲಿ ದುಡಿಯುವವರ ಭ್ರಮೆ. ಇದರಿಂದ ಟಿಆರ್‌ಪಿ ಮೇಲೆ ಆಗುವ ಪರಿಣಾಮ ಅಲ್ಪ. ಯಾಕಂದ್ರೆ ಯಾವೊಬ್ಬ ವೀಕ್ಷಕನೂ ಇವತ್ತು ೨೪*೭ ಸುದ್ದಿವಾಹಿನಿಯನ್ನು ಪಟ್ಟು ಹಿಡಿದು ನೋಡುವುದಿಲ್ಲ. ಯಾವುದೋ ಧಾರವಾಹಿಯ ನಡುವೆ, ರಿಯಾಲಿಟಿ ಷೋನಲ್ಲಿ ಜಾಹೀರಾತು ಬಂದಾಗ ನೋಡುಗನ ದೃಷ್ಟಿ ೨೪*೭ ಕಡೆ ಹೊರಳುತ್ತದೆ. ಅದರ ಹೊರತಾಗಿ ೯ಗಂಟೆಯ ನ್ಯೂಸ್‌ನಂಥ ಬೆರಳೆಣಿಕೆಯಷ್ಟು ಪ್ರಮುಖ ನ್ಯೂಸ್‌ಗೆ ಖಾಯಂ ವೀಕ್ಷಕರಿದ್ದಾರೆ. ಹೀಗಾಗಿ ಯಾವ ಸುದ್ದಿಯನ್ನು ಯಾರೂ ಮೊದಲು ನೀಡಿದ್ದು, ಯಾರು ಬ್ರೇಕ್ ಮಾಡಿದ್ದು ಎಂಬಿತ್ಯಾದಿ ಅಂಶಗಳು ಅದೆಷ್ಟೋ ವೀಕ್ಷಕರಿಗೆ ತಿಳಿದೇ ಇರುವುದಿಲ್ಲ. ಇನ್ನೂ ಖಾಯಂ ಆಗಿ ಸುದ್ದಿವಾಹಿನಿ ವೀಕ್ಷಿಸುವವರು ಕೂಡ ಈ ಬ್ರೇಕಿಂಗ್ ಎಂಬ ಹುಚ್ಚುತನದ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ.

ಒಂದು ಸುದ್ದಿವಾಹಿನಿಗೆ ಪ್ರಮುಖ ಅಸ್ತ್ರ ಒಂದೊಳ್ಳೆ ಕಾರ್ಯಕ್ರಮ. ಬಹುಶಃ ೬ ತಿಂಗಳಿನಿಂದ ಟಿಆರ್‌ಪಿಯಲ್ಲಿ ಹೆಚ್ಚು ವ್ಯತ್ಯಾಸವಾಗದೆ ಇರುವ ಕಾರ್ಯಕ್ರಮವೆಂದರೆ ರಾತ್ರಿ ೯-೯.೩೦ರವರೆಗೆ ಪ್ರಸಾರವಾಗುವ ಟಿವಿ-೯ ವಿಶೇಷ ಹಾಗೂ ಸುವರ್ಣ ನ್ಯೂಸ್‌ನಲ್ಲಿ ಪ್ರತಿನಿತ್ಯ ಬೆಳಿಗ್ಗೆ ೮-೯ರವರೆಗೆ ಪ್ರಸಾರವಾಗುವ ಬ್ರೇಕ್‌ಫಾಸ್ಟ್ ಮತ್ತು ರಾತ್ರಿ ೯ಗಂಟೆಯ ಸುವರ್ಣಸುದ್ದಿ. ಇದರ ಹೊರತಾಗಿ ಕ್ರೀಡಾ ಬುಲೆಟಿನ್‌ಗಳು, ಸಿನಿಮಾ ಸುದ್ದಿಗಳು ಒಂದಷ್ಟು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತವೆ. ನಾವಿಲ್ಲಿ ಸುದ್ದಿಯನ್ನು ಎಷ್ಟು ವೇಗವಾಗಿ ಕೊಡುತ್ತೇವೆ ಎಂಬುದರ ಜೊತೆಗೆ, ಎಷ್ಟು ಅದ್ಭುತವಾಗಿ ಕೊಡುತ್ತೇವೆ ಎಂಬುದು ಮುಖ್ಯವಾಗುತ್ತದೆ.

ನನಗಂತೂ ಇವತ್ತಿಗೂ ನ್ಯೂಸ್ ಅಂದಕೂಡಲೆ ಕಣ್ಮುಂದೆ ಬರುವುದು ಈಟಿವಿಯ ಅಗ್ರ ರಾಷ್ಟ್ರೀಯ ವಾರ್ತೆ. ಕನ್ನಡದ ಸುದ್ದಿ ಜಗತ್ತಿಗೊಂದು ಚೆಂದದ ಸ್ವರೂಪ ಕೊಟ್ಟಿದ್ದು ಈಟಿವಿ. ಅದೇ ಈಟಿವಿಯಿಂದ ಬಂದ ಅನೇಕರು ಇವತ್ತು ದೃಶ್ಯ ಮಾಧ್ಯಮದಲ್ಲಿ ತುಂಬಿದ್ದಾರೆ. ಆದರೆ ಅಂಥದ್ದೊಂದು ನ್ಯೂಸ್ ಬುಲೆಟಿನ್ ಮಾಡಲು ಮಾತ್ರ ಅವರಿಂದ ಸಾಧ್ಯವಾಗುತ್ತಿಲ್ಲ! ಇದೀಗ ನಮ್ಮೊಂದಿಗೆ ಪ್ರತಿನಿಧಿ ಶ್ರೀ….ಗಳು ನೇರಸಂಪರ್ಕದಲ್ಲಿದ್ದಾರೆ ಎಂಬ ನ್ಯೂಸ್ ಚಾನೆಲ್‌ಗಳ ಹಿಂಸೆ ನೋಡಿ ಅನೇಕರು ಬೈದಿಕೊಂಡಿರುತ್ತಾರೆ.

ಯಡಿಯೂರಪ್ಪ ಪರಪ್ಪನ ಅಗ್ರಹಾರದಲ್ಲಿ ಯಾವ ಸೋಪು ಬಳಸಿದ್ರು ಅಂತಾ ಒಂದು ವಾಹಿನಿಯ ವರದಿಗಾರ ನೇರ ಪ್ರಸಾರ ನೀಡುತ್ತಿರುತ್ತಾನೆ. ಇನ್ನೊಂದು ವಾಹಿನಿಯವನು ಯಡಿಯೂರಪ್ಪ ತಲೆಗೆ ಸ್ನಾನ ಮಾಡಿದ್ರೊ, ಇಲ್ಲವೊ…?! ಮಾಡಿದ್ದರೆ ಯಾವ ಶಾಂಪೂ ಬಳಸಿರಬಹುದು ಎಂಬ ಕುರಿತು ಕಥೆ ಕಟ್ಟಿ ಹೇಳುತ್ತಿರುತ್ತಾನೆ! ಬಹುಶಃ ಅರ್ಧ ಗಂಟೆಯ ಸುದ್ದಿಯನ್ನು ಯಾವುದೇ ಖರ್ಚಿಲ್ಲದೆ ತುಂಬಿಸಲಿಕ್ಕೋಸ್ಕರವೇ ಈ ಲೈವ್‌ಚಾಟ್ ಎಂಬ ದುರಂತ ಹುಟ್ಟಿದ್ದಿರಬೇಕು! ಖಂಡಿತಾ ವರದಿಗಾರನೊಬ್ಬ ಚೆಂದವಾಗಿ ವಿವರಣೆ ಕೊಟ್ಟರೆ, ಅದು ಕೇಳಲು ಸೊಗಸಾಗಿ ಇರುತ್ತದೆ. ಜೊತೆಗೆ ಆ ವಿವರಣೆ ಮಿತಿಯಲ್ಲಿದ್ದರೆ ಚೆಂದ. ಇದರಲ್ಲಿ ಸುದ್ದಿ ಓದುವ ನಿರೂಪಕರ ಪಾಲು ಇರುತ್ತದೆ. ಇವರು ಎಷ್ಟು ಅದ್ಭುತವಾಗಿ ಪ್ರಶ್ನೆ ಕೇಳುತ್ತಾರೊ, ಅಷ್ಟು ಅದ್ಭುತವಾಗಿ ಲೈವ್‌ಚಾಟ್ ಬರುತ್ತದೆ. ಇಲ್ಲವಾದರೆ ಯಡಿಯೂರಪ್ಪ ಬಳಸಿದ ಬೆಡ್‌ಶಿಟ್, ಬಕೆಟ್, ಬ್ರಶ್…ಇತ್ಯಾದಿಗಳು…!

ನೀವು ಜಾಹೀರಾತು ಬಂದಾಗ ಸುದ್ದಿ ವಾಹಿನಿ ನೋಡುವಿರಿ. ನಾವು ನಿತ್ಯವೂ ಈ ಕರ್ಮಕಾಂಡ ನೋಡಬೇಕು! ಇಂಥ ಒಂದು ಅದ್ಭುತ ಅನುಭವಕ್ಕಾಗಿಯೇ ನಾನು ಕೂಡ ದೃಶ್ಯಮಾಧ್ಯಮಕ್ಕೆ ಕಾಲಿಟ್ಟಿದ್ದು. ಅಲ್ಲಿನ ಸವಾಲು, ಸಮಸ್ಯೆ ತಿಳಿದುಕೊಳ್ಳಬೇಕು ಎಂಬ ಚಟವಿತ್ತು. ಬಹುಶಃ ಒಂದು ವರ್ಷದ ಅವಧಿಯಲ್ಲಿ ದೃಶ್ಯ ಮಾಧ್ಯಮವನ್ನು ಸಾಕಷ್ಟು ಅರ್ಥೈಸಿಕೊಂಡಿರುವೆ. ಇಲ್ಲಿ ಮಾಡಬಹುದಾದ ಹೊಸ ಸಾಧ್ಯತೆಗಳು ಗೊತ್ತಾಗಿದೆ.

ನಮ್ಮೂರಿನ ಬಹುತೇಕ ಮನೆಗಳಲ್ಲಿ ಸಂಜೆ ಯಶಸ್ವಿಯಾಗಿ ಓಡುವುದು ‘ಜಿ’ ಹಿಂದಿ ವಾಹಿನಿ. ಅದರ ಹೊರತಾಗಿ ಗುರುರಾಘವೇಂದ್ರ ವೈಭವ, ಮುಕ್ತದಂಥ ಒಂದೆರಡು ಧಾರವಾಹಿಗಳು. ಇದರಿಂದ ವೀಕ್ಷಕರನ್ನು ಸುದ್ದಿವಾಹಿನಿಯತ್ತ ಡೈವರ್ಟ್ ಮಾಡುವುದು ಅಷ್ಟು ಸುಲಭದ ಮಾತೇನಲ್ಲ. ಹಾಗಾಗಿಯೇ ಪ್ರತಿವಾರವೂ ಸುದ್ದಿವಾಹಿನಿ ನೋಡುವ ವೀಕ್ಷಕರ ಸಂಖ್ಯೆ ಕುಸಿಯುತ್ತಿರುವುದು. ಜೊತೆಗೆ ಹೊಸತಾಗಿ ಬಂದ ಸುದ್ದಿವಾಹಿನಿಗಳಿಗೆ ಖಾಯಂ ನೋಡುಗರು ಹಂಚಿಹೋಗುತ್ತಾರೆ. ಖಂಡಿತವಾಗಿಯೂ ಹೇಳುತ್ತೇನೆ ಟಿಆರ್‌ಪಿ ಹೆಸರಿನಲ್ಲಿ ಬಟ್ಟೆ ಬಿಚ್ಚುವ ಕಾರ್ಯಕ್ರಮಕ್ಕೆ ಅಂತಿಮವಾಗಿ ಬರುವ ರೇಟಿಂಗ್ ೦.೫-೧. ಕೆಲವಕ್ಕೆ ೦.೫ಗಿಂತ ಕಡಿಮೆ ಬರುವುದು ಉಂಟು. ಗಂಗೂಲಿ ಸೊನ್ನೆ ಹೊಡೆಯುತ್ತಾನೆ ಎಂದರೆ, ನನಗೂ ಅದನ್ನು ಹೊಡೆಯಲು ಬರುವುದಿಲ್ಲವಾ? ಎಂಬುದು ಹಳೆ ಗಾದೆ. ಹಾಗೆ ಒಂದಷ್ಟು ಒಳ್ಳೆ ಕಾರ್ಯಕ್ರಮ ಮಾಡಿದರೆ ಗಂಟೇನು ಖರ್ಚಾಗುತ್ತೆ ಅಲ್ವಾ? ವಾಹಿನಿಗಳ ಪ್ರಮುಖ ಖುರ್ಚಿಯಲ್ಲಿ ಕುಳಿತವರ ಮನಸ್ಥಿತಿ ಬದಲಾಗಬೇಕು. ಜೊತೆಗೆ ತಮ್ಮ ಅಂಗಳದಲ್ಲಿ ವಾಹಿನಿಗಳಿಗೆ ಉಗಿಯುವ ಜನ, ಆ ಉಗಿತವನ್ನು ವಾಹಿನಿಗಳ ಕಚೇರಿಗೂ ತಲುಪಿಸುವ ಪ್ರಯತ್ನ ಮಾಡಬೇಕು. ಜನ ಈ ಕಾರ್ಯಕ್ರಮಕ್ಕೆ ಉಗಿಯುತ್ತಿದ್ದಾರೆ ಎಂಬುದು ಒಳಗೆ ಕುಳಿತ ನಮಗೆ ತಿಳಿದರೆ ಮಾತ್ರ ಕಾರ್ಯಕ್ರಮ ಬದಲಾಯಿಸಲು ಸಾಧ್ಯ.

ನಮ್ಮ ದುರಂತ ಇದೇ ನೋಡಿ. ನಾವು ಬೈದಿದ್ದು ಯಾರನ್ನು ತಲುಪಬೇಕೋ ಅವರನ್ನು ತಲುಪುವುದೇ ಇಲ್ಲ. ಅವರನ್ನು ತಲುಪುವ ಒಂದು ಪ್ರಯತ್ನ ನಾವು ಮಾಡಬಹುದು. ವರದಹಳ್ಳಿ ಕುರಿತು ಮೊನ್ನೆ ಲವಲವಿಕೆಯಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಅದರ ಕುರಿತು ಹಲವರು ಬ್ಲಾಗ್ ಲೋಕದಲ್ಲಿ ಬೊಬ್ಬೆ ಹೊಡೆದರು. ಲೇಖಕರನ್ನು ಬೈದರು ಹೊರತೂ, ಯಾರೂ ಕೂಡ ಲೇಖನದ ಕುರಿತು ಸ್ಪಷ್ಟೀಕರಣ ಕೊಡಿ ಅಂತ ಒಂದು ಪತ್ರವನ್ನು ವಿ.ಕ ಕಚೇರಿಗೆ ಬರೆಯಲಿಲ್ಲ. ವಾಸ್ತವವಾಗಿ ಲೇಖನ ಪ್ರಕಟವಾದ ನಂತರ ಅದು ಪತ್ರಿಕೆಯ ಸ್ವತ್ತಾಗುತ್ತೆ. ಹಾಗಾಗಿ ಅದರಲ್ಲಿ ಲೇಖಕನಿಗೆ ಮರು ಉತ್ತರ ಕೊಡುವ ಸ್ವಾತಂತ್ರ್ಯ ಇರುವುದಿಲ್ಲ. ಖಂಡಿತವಾಗಿಯೂ ನಾಲ್ಕರು ಮಂದಿ ಕಚೇರಿಗೆ ಹೋಗಿ  ಆ ಲೇಖನವನ್ನು ಸೂಕ್ತವಾದ ರೀತಿಯಲ್ಲಿ ಪ್ರತಿಭಟಿಸಿದ್ದರೆ ಸ್ಪಷ್ಟೀಕರಣ ಸಿಗುತ್ತಿತ್ತು. ಒಂದು ಪುಟದ ಮಾನ ಹರಾಜಿಗೆ ನಮ್ಮ ಪತ್ರಿಕೆಗಳು ಒಂದೇ ಸಾಲಿನ ಸ್ಪಷ್ಟೀಕರಣ ನೀಡುತ್ತವೆ ಎಂಬುದು ನಂತರದ ಮಾತು ಬಿಡಿ. ಆದರೆ ಅಷ್ಟಾದರೂ ಸಿಗುತ್ತಿತ್ತು. ಆ ಪ್ರಯತ್ನ ಮಾಡದೇ ನಾವು ಸುಮ್ಮನೆ ಮನೆಯಲ್ಲಿ ಕುಳಿತು ಬೊಬ್ಬೆ ಹೊಡೆಯುತ್ತೇವೆ. ಹೀಗಾಗಿ ಇಂಥ ಪ್ರಮಾದಗಳಲ್ಲಿ ಸಾರ್ವಜನಿಕರ ಪಾಲೂ ಇದೆ.

ಅದ್ಯಾಕೊ ನೀಲಿ ಚಿತ್ರ ತೋರಿಸಿದ ವಾಹಿನಿಗಳ ನಿಲುವು ಬೇಸರ ತರಿಸಿದೆ. ಹೀಗಾಗಿ ನಾನೊಬ್ಬ ದೃಶ್ಯ ಮಾಧ್ಯಮದ ಪ್ರತಿನಿಧಿ ಎಂಬುದನ್ನು ಮರೆತು, ನನ್ನ ಮಿತಿಯಿಂದ ಹೊರಬಂದು ಇಷ್ಟೆಲ್ಲ ಬರೆದಿದ್ದೇನೆ. ನಾಳೆ ನಾನು ಮುಖ್ಯಸ್ಥನ ಸ್ಥಾನದಲ್ಲಿ ಕುಳಿತರೂ ನನ್ನಿಂದಲೇ ಇಂಥ ತಪ್ಪುಗಳು ಮರುಕಳಿಸುತ್ತದೆಯೋ, ಏನೋ ಗೊತ್ತಿಲ್ಲ. ಇವುಗಳ ಹಿಂದಿರಬಹುದಾದ ಆಡಳಿತ ಮಂಡಳಿ ಒತ್ತಡದ ಕುರಿತು ನನಗೆ ಅರಿವಿಲ್ಲ…

ಅಯ್ಯೊ ನಮ್ಮ ಕಥೆ ಏನು ಹೇಳೋದು ಬಿಡಿ. ಕಡ್ಲೆ ಇದ್ದಾಗ ಹಲ್ಲಿಲ್ಲ, ಹಲ್ಲಿದ್ದಾಗ ಕಡ್ಲೆ ಇಲ್ಲ ಅಂತಾರಲ್ಲ, ಒಂಥರ ಹಾಗೆ…ಹಾಗಂತ ಸದಾ ಕೊರಗುವ ಅನೇಕರನ್ನು ನಾವು ಕಾಣುತ್ತೇವೆ. ನನ್ನ ಹತ್ರ ಸಕ್ಕತ್ ಬುದ್ಧಿವಂತಿಕೆಯಿದೆ. ಆದ್ರೆ ನಮ್ಮ ಬಾಸು ನನ್ನ ಬೆಳಿಯೋಕೆ ಬಿಡ್ತಿಲ್ಲ. ನಮ್ಮ ಕಚೇರಿಯಲ್ಲಿ ನನ್ನ ಕಂಡ್ರೆ ಸಿಕ್ಕಾಪಟ್ಟೆ ಹೊಟ್ಟೆಕಿಚ್ಚು. ನಮ್ಮ ನೆರೆಯವ್ರಿಗೆ ನನ್ನ ಬೆಳಿಯೋದು ಇಷ್ಟವಿಲ್ಲ. ಹೀಗಾಗಿ ನನ್ನ ಕೆಲ್ಸಗಳಿಗೆ ಅಡ್ಡಗಾಲು ಹಾಕ್ತಾರೆ ಅನ್ನೋರು ಸಾಕಷ್ಟು ಮಂದಿ. ಹೌದು, ಬದುಕಿದ್ದಷ್ಟೂ ದಿನ ಬೇರೆಯವರತ್ತ ಬೆರಳು ತೋರಿಸಿ ನಮ್ಮ ತಪ್ಪು ಮುಚ್ಚಿಕೊಳ್ಳುತ್ತೇವೆ ಹೊರತು, ಏನು ಸಾಧಿಸಲು ನಮ್ಮಿಂದ ಸಾಧ್ಯವಾಗಲಿಲ್ಲ ಎಂಬುದನ್ನು ಕೊನೆವೆರೆಗೂ ಒಪ್ಪಿಕೊಳ್ಳುವುದಿಲ್ಲ. ವಿತ್ತಂಡ ವಾದದಲ್ಲೇ ಸತ್ತು ಹೋಗುತ್ತೇವೆ. ಅಂಥವ್ರಿಗೆಲ್ಲ ಸಡ್ಡು ಹೊಡೆಯಬಲ್ಲ ವ್ಯಕ್ತಿಯೊಬ್ಬನ ಕಥೆ ಇಲ್ಲಿದೆ.

‘ಲೈಫ್ ವಿಥೌಟ್ ಲಿಮಿಟ್ಸ್’ ಇಂಗ್ಲೀಷ್‌ನ ಬಹು ಜನಪ್ರಿಯ ಪುಸ್ತಕ. ಹೌದು, ಹೆಸರೇ ಹೇಳುವ ಹಾಗೆ ಬದುಕಿನ ಮಿತಿಯಿಲ್ಲದೆ ಬದುಕುತ್ತಿರುವವನ ಅದ್ಭುತ ಕಥೆಯದು. ಅಯ್ಯೊ ನಾವು ಬಡವ್ರು. ನಮ್ಮ ಮನೆಯಲ್ಲಿ ಅದಿಲ್ಲ, ಇದಿಲ್ಲ…ದಿನ ಬೆಳಗಾದ್ರೆ ಹಲವರದ್ದು ಇದೇ ಕೊರಗು. ದೇವ್ರು ಬಂಗಾರದಂಥ ಕೈಕಾಲು ಕೊಟ್ಟಿದ್ದಾನೆ. ಕಣ್ಣು-ಕಿವಿಗಳು ನೆಟ್ಟಗಿವೆ ಅನ್ನೋದು ಮರೆತವರಿಗೆ ಸ್ಪೂರ್ತಿಯಾಗಬಲ್ಲ ಪುಸ್ತಕವದು. ಈ ಪುಸ್ತಕದ ಲೇಖಕ ನಿಕೋಲಸ್ ಜೇಮ್ಸ್ ವ್ಯುಜಿಕ್. ಆತನ ಸ್ವಂತ ಬದುಕನ್ನೇ ಪುಸ್ತಕವಾಗಿಸಿದ್ದಾನೆ.

ವ್ಯುಜಿಕ್‌ಗೆ ಎರಡೂ ಕೈಗಳಿಲ್ಲ. ಕಾಲೂ ಇದ್ದರೂ, ಲೆಕ್ಕಕ್ಕಿಲ್ಲ. ಅಂಥ ಕಾಲನ್ನೇ ಕೈಯನ್ನಾಗಿ ಬಳಸಿಕೊಂಡು ಈತ ಮಾಡಿದ ಸಾಧನೆಗೆ ಲೆಕ್ಕವಿಲ್ಲ. ಪುಸ್ತಕ ಬರೆದ, ಸಿನಿಮಾ ಮಾಡಿದ, ೨೪ ದೇಶಗಳನ್ನು ಸುತ್ತಿದ. ಕೈ-ಕಾಲು ಇಲ್ಲದಿದ್ದರೆ ಏನಂತೆ, ಸಾಧಿಸುವ ಮನಸ್ಸಿದೆ. ಛಲವಿದೆ ಅಂತಾ ಹೊರಟ. ಇಂಥ ಬದುಕಿನ ಸಮಗ್ರ ಚಿತ್ರಣವನ್ನು ಇಲ್ಲಿ ಬಿಡಿಸಿಡುತ್ತಾನೆ.

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಡಿ.೪, ೧೯೮೨ರಂದು ಜನಿಸಿದ ವ್ಯುಜಿಕ್‌ಗೆ ಹುಟ್ಟಿನಿಂದಲೇ ಕೈಗಳಿರುವುದಿಲ್ಲ. ಅದಕ್ಕೆ ಕಾರಣ ಟೆಟ್ರಾ ಅಮೆಲಿಯಾ ಅನ್ನೋ ಖಾಯಿಲೆ. ಕೋಟಿಯಲ್ಲಿ ಒಬ್ಬರಿಗೆ ಬರುವ ಈ ಸಿಂಡ್ರೋಮ್, ಬದುಕನ್ನು ಕಸಿದುಕೊಂಡು ಬಿಡುತ್ತದೆ. ಕಾಲೂ ಇದ್ದರೂ, ಅದಕ್ಕೆ ಜೀವವಿಲ್ಲ. ಹೀಗಾಗಿ ಇಡೀ ದೇಹಕ್ಕೆ ಪುಟ್ಟ ಪಾದಗಳು ಮಾತ್ರ ಆಧಾರ.

ಸೈಬಿರಿಯನ್ ಕುಟುಂಬದಲ್ಲಿ ಹುಟ್ಟಿದ ಕೈಗಳಿಲ್ಲದ ವ್ಯುಜಿಕ್‌ಗಾಗಿ ಹೆತ್ತವರು ಸಾಕಷ್ಟು ಕಣ್ಣೀರಿಡುತ್ತಾರೆ. ಅನೇಕ ವೈದ್ಯರ ಬಳಿ ತೋರಿಸುತ್ತಾರೆ. ಮಗನಿಗೆ ಕೈ ಬರಲಿ ಅಂತಾ ಹಲವು ದೇವರ ಮೊರೆ ಹೋಗುತ್ತಾರೆ. ಆದರೆ ಇವ್ಯಾವುದು ಪ್ರಯೋಜನಕ್ಕೆ ಬರುವುದಿಲ್ಲ. ಶಾಶ್ವತವಾಗಿ ಕೈಗಳು ಬರುವುದಿಲ್ಲ ಎಂದು ಗೊತ್ತಾದಾಗ ಈತನ ತಾಯಿ ಬಿಕ್ಕಿ-ಬಿಕ್ಕಿ ಅಳುತ್ತಾಳೆ. ಮೊದಲಿಗೆ ತಂದೆ ತಾಯಿಗಳ ಬದುಕು ಈತನ ಸೇವೆಗಾಗಿಯೇ ಮುಡುಪಾಗುತ್ತೆ. ಹೆತ್ತವರು ಕಂದಮ್ಮನನ್ನು ಬಿಟ್ಟು ಕದಲುವುದಿಲ್ಲ. ಈತನ ಎಲ್ಲಾ ಸೇವೆಯನ್ನು ಮಾಡುತ್ತಾರೆ. ಮಗನ ಅವಸ್ಥೆ ನೋಡಿ ಆಗಾಗ ಬಿಕ್ಕುತ್ತಾರೆ.
ವ್ಯುಜಿಕ್‌ಗೆ ಆಗ ೫ ವರ್ಷ.  ಈತನ್ನನ್ನು ಶಾಲೆಗೆ ಸೇರಿಸಲು ಹೋಗುತ್ತಾರೆ. ಆದರೆ ವಿಕ್ಟೋರಿಯಾ ಶಾಲೆಯಲ್ಲಿ ಇವನಿಗೆ ಅವಕಾಶ ನಿರಾಕರಿಸುತ್ತಾರೆ. ದೈಹಿಕ ವಿಕಲಚೇತನರಿಗೆ ಶಾಲೆಯಲ್ಲಿ ಅವಕಾಶವಿಲ್ಲ ಎಂಬ ಕಾನೂನು ಅಲ್ಲಿರುತ್ತೆ. ಮಾನಸಿಕವಾಗಿ ಸರಿಯಿದ್ದರೂ, ದೈಹಿಕ ಅಂಗ ವಿಕಲರಿಗೆ ಶಾಲೆಗೆ ಕಾಲಿಡುವ ಅವಕಾಶ ಇರಲಿಲ್ಲ. ಹೀಗಾಗಿ ವ್ಯುಜಿಕ್ ಹೆತ್ತವರು ಹ್ಯಾಪು ಮೊರೆ ಹಾಕಿಕೊಂಡು ಮನೆಗೆ ಮರಳುತ್ತಾರೆ.

೨ ಕೈಗಳನ್ನು ಕಳೆದುಕೊಂಡ ನೋವು ಅನುಭವಿಸುತ್ತಿದ್ದ ವ್ಯುಜಿಕ್ ಪಾಲಿಗೆ ಅದು ನುಂಗಲಾರದ ತುತ್ತು. ಶಾಲೆಗೆ ಪ್ರವೇಶ ದೊರಕುವುದಿಲ್ಲ. ಮನೆ ಜೈಲು ಅನ್ನಿಸಲು ಶುರುವಾಗುತ್ತೆ. ಅಪ್ಪ-ಅಮ್ಮನ ನೋವು ನುಂಗಿಕೊಳ್ಳುವ ಸಾಮರ್ಥ್ಯವನ್ನು ವ್ಯುಜಿಕ್ ಕಳೆದುಕೊಳ್ಳುತ್ತಾನೆ. ಅಮ್ಮನ ಕಣ್ಣೀರು ನೋಡಲಾಗದೆ ಆತ್ಮಹತ್ಯೆಯ ಯತ್ನ ಮಾಡುತ್ತಾನೆ. ಆಗ ಈತನಿಗೆ ಕೇವಲ ೮ ವರ್ಷವಾಗಿರುತ್ತೆ. ಹೆತ್ತವರಿಗೆ ತಾನು ಹೊರೆಯಾಗುತ್ತಿರುವೆ ಎಂಬ ಒಂದೇ ಕಾರಣಕ್ಕಾಗಿ ಆತ್ಮಹತ್ಯಗೆ ಮುಂದಾಗಿರುತ್ತಾನೆ. ಈ ವಿಚಾರ ಅಮ್ಮನಿಗೆ ಗೊತ್ತಾಗುತ್ತೆ.

ವಾಸ್ತವವಾಗಿ ಹೆತ್ತವರಿಗೆ ಮಗ ಹೊರೆಯಾಗಿರುವುದಿಲ್ಲ. ಆದರೆ ಕಣ್ಣೆದುರಿಗೆ ಕೈಯಿಲ್ಲದ ಮಗನನ್ನು ನೋಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಮ್ಮ ಅಳುತ್ತಿದ್ದಳು. ಯಾವತ್ತು ಮಗ ತನ್ನಿಂದ ಆತ್ಮಹತ್ಯೆಗೆ ಮುಂದಾದ ಎಂದು ಗೊತ್ತಾಗುತ್ತೊ, ಆವತ್ತು ತಾಯಿ ಗಟ್ಟಿಯಾಗುತ್ತಾಳೆ. ಪತ್ರಿಕೆಯಲ್ಲಿ ಬಂದ ದೈಹಿಕ ವಿಕಲಚೇತನರೊಬ್ಬರ ಬದುಕಿನ ಕಥೆಯನ್ನು ಮಗನಿಗೆ ಓದಲು ಕೊಡುತ್ತಾಳೆ. ಇದನ್ನು ಓದಿದ ವ್ಯುಜಿಕ್ ಅಕ್ಷರಶಃ ಥ್ರಿಲ್ ಆಗುತ್ತಾನೆ. ಕೈಗಳು ಇಲ್ಲದಿದ್ದರೆ ಏನಂತೆ, ಕಾಲಿನಲ್ಲೇ ಏನಾದ್ರು ಸಾಧನೆ ಮಾಡಬೇಕು ಅಂತಾ ಆವತ್ತೇ ನಿರ್ಧರಿಸುತ್ತಾನೆ. ಅಲ್ಲಿಂದ ಆತನ ಬದುಕಿನ ಚಿತ್ರಣವೇ ಬದಲಾಗುತ್ತೆ.

ಅಷ್ಟೊತ್ತಿಗೆ ವಿಕ್ಟೋರಿಯಾ ಶಾಲೆಯ ಕಾನೂನು ಬದಲಾಗುತ್ತೆ. ದೈಹಿಕ ವಿಕಲ ಚೇತನರಿಗೂ ಅವಕಾಶ ಸಿಗುತ್ತೆ. ಆ ಶಾಲೆಯಲ್ಲಿ ಪ್ರವೇಶ ಪಡೆದ ಮೊದಲ ವಿಕಲಚೇತನ ಎಂಬ ಹೆಗ್ಗಳಿಕೆ ವ್ಯುಜಿಕ್ ಹೆಗಲು ಏರುತ್ತೆ. ಶಾಲೆ ಸೇರಿದ, ಪದವಿ ಪಡೆದ. ಇಷ್ಟಕ್ಕೆ ಮುಗಿಯುವುದಿಲ್ಲ ಈತನ ಕಥೆ. ಇಷ್ಟಕ್ಕೆ ಮುಗಿದಿದ್ದರೆ, ಇವನ ಕುರಿತು ನಾವು ಮಾತನಾಡುವ ಅಗತ್ಯವೂ ಬರುತ್ತಿರಲಿಲ್ಲ.

ಅದ್ಯಾಕೊ ಶಾಲೆಯಲ್ಲಿ ಪ್ರವೇಶ ಸಿಕ್ಕರೂ ಮನೆ ಮಾತ್ರ ಆತನಿಗೆ ಜೈಲು ಅನ್ನಿಸಲು ಶುರುವಾಗುತ್ತೆ. ಅಪ್ಪ-ಅಮ್ಮನಿಗೆ ಹೊರೆಯಾಗಿದ್ದೇನೆ ಎಂಬ ಭಾವ ಜಾಗೃತವಾಗುತ್ತೆ. ಎಲ್ಲರಿಂದ ದೂರ ಹೋಗಲು ಬದುಕು ಬಯಸುತ್ತೆ. ಸ್ವಾವಲಂಬಿಯಾಗಿ, ಏಕಾಂಗಿಯಾಗಿ ಬದುಕಲು ಹೊರಡುತ್ತಾನೆ. ನೀರು ಕುಡಿಯಲು ಕೈಗಳಿಲ್ಲ. ಒಂದು ಲೋಟ ನೀರಿಗೂ ಅಮ್ಮನನ್ನು ಕರೆಯಬೇಕು. ಊಟ ಮಾಡಲು ಕೈಗಳಿಲ್ಲ. ಸ್ನಾನದಿಂದ ಹಿಡಿದು ಪ್ರತಿಯೊಂದನ್ನೂ ಅಮ್ಮನೇ ಮಾಡಿಕೊಡಬೇಕು…ಇದು ಆವತ್ತು ವ್ಯುಜಿಕ್ ಮನೆಯ ಚಿತ್ರಣ. ಇದ್ರಿಂದ ತೀವ್ರ ಬೇಸರವಾಗೊಳ್ಳುತ್ತಾನೆ. ೧೦ನೇ ವರ್ಷಕ್ಕೆ ಮನೆ ಬಿಡಲು ನಿರ್ಧರಿಸುತ್ತಾನೆ. ಏಕಾಂಗಿ ಬದುಕಿಗೆ ಹಪಹಪಿಸುತ್ತಾನೆ. ಸ್ವಾವಲಂಬಿಯಾಗುತ್ತೇನೆ ಅಂತಾ ಕೂರುತ್ತಾನೆ ವ್ಯುಜಿಕ್.

ಒನ್ಸ್ ಅಗೈನ್ ಅಮ್ಮನ ಪ್ರೀತಿ ಈತನ ನಿರ್ಧಾರಕ್ಕೆ ಅಡ್ಡಗಾಲಾಗುತ್ತೆ. ಮನೆ ಬಿಟ್ಟು ಹೋಗುವ ನಿರ್ಧಾರ ಬದಲಿಸುತ್ತಾನೆ. ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕುತ್ತಾನೆ. ಮೊದಲಿಗೆ ತನ್ನ ಪಾದಗಳಿಂದ ಬರೆಯಲು ಕಲಿಯುತ್ತಾನೆ. ನಂತರ ನಿಧಾನವಾಗಿ ಕಂಪ್ಯೂಟರ್ ಕೀಗಳನ್ನು ಕುಟ್ಟಲು ಆರಂಭಿಸುತ್ತಾನೆ. ಈ ೨ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾನೆ ಕೂಡ.

ಯಸ್, ಕೈಗಳಿಲ್ಲದ ವ್ಯುಜಿಕ್‌ಗೆ ಕಾಲಿನ ಪಾದವೇ ಕೈಯಾಗುತ್ತೆ. ಹಾಗಂತ ಪುಸ್ತಕದಲ್ಲಿ ಸುಂದರವಾಗಿ ಬರೆದುಕೊಳ್ಳುತ್ತಾರೆ ವ್ಯುಜಿಕ್. ಸ್ವಾವಲಂಬಿಯಾಗುವ ಬಯಕೆ ಇಷ್ಟಕ್ಕೆ ನಿಲ್ಲುವುದಿಲ್ಲ. ಅಮ್ಮನಿಗೆ ಹೊರೆಯಾಗಬಾರದು ಎಂಬ ಒಂದೇ ಒಂದು ಕೊರಗು ಮನಸ್ಸಿನೊಳಗೆ ಕೊರಗುತ್ತಿರುತ್ತೆ. ಟೆನ್ನಿಸ್ ಬಾಲ್ ಎಸೆಯಲು ಕಲಿಯುತ್ತಾನೆ. ಡ್ರಮ್ ಪೆಡಲ್ ತುಳಿಯುತ್ತಾನೆ. ಕೊನೆಗೆ ನೀರಿನ ಲೋಟವನ್ನು ಕಾಲಿನಿಂದ ಎತ್ತಿ ಬಾಯಿಗೆ ತೆಗೆದುಕೊಂಡು ಹೋಗಲು ಸಾಹಸ ಪಡುತ್ತಾನೆ. ನೋ ಡೌಟ್, ಅಂದುಕೊಂಡಂತೆ ತನ್ನ ಪುಟ್ಟ ಪಾದಗಳಿಂದ ನೀರು ಕುಡಿದೇ ಬಯಕೆ ತೀರಿಸಿಕೊಳ್ಳುತ್ತಾನೆ. ಆವತ್ತು ಆತ್ಮಹತ್ಯೆಗೆ ಹೊರಟ್ಟಿದ್ದ ವ್ಯುಜಿಕ್, ಇವತ್ತು ಅಕ್ಷರಶಃ ಬದಲಾಗುತ್ತಾನೆ. ಇದರ ವರ್ಣನೆ ಓದುತ್ತಿದ್ದಾಗ ಎಂಥರವ ಕಣ್ಣೀನಲ್ಲೂ ನೀರು ಇಳುಯತ್ತೆ. ಮನುಷ್ಯ ಮನಸ್ಸು ಮಾಡಿದರೆ ಏನೆಲ್ಲ ಆಗಬಹುದು ಎಂಬ ಭಾವ ಜಾಗೃತವಾಗುತ್ತೆ. ಬದುಕಿನಲ್ಲಿ ಏನಾದರೂ ಸಾಧಿಸಿಯೇ ತೀರಬೆಕೆಂಬ ಛಲ ಹುಟ್ಟುತ್ತೆ.

ನಾವಾಗಿದ್ದರೆ ಇಷ್ಟಕ್ಕೆ ಸುಸ್ತಾಗಿ ಬಿಡುತ್ತಿದ್ದೆವು. ಅಯ್ಯೊ ನನ್ನ ಹತ್ರ ಬುದ್ಧಿವಂತಿಕೆ ಇತ್ತು. ಆದ್ರೆ ಅದನ್ನು ಸಾಬೀತುಪಡಿಸಲು ಕೈಗಳಿಲಿಲ್ಲ ಅಂತಾ ಕೊರಗುತ್ತಿದ್ದೆವು. ಆದ್ರೆ ಈತ ಮಾತ್ರ ತನ್ನ ಬುದ್ಧಿವಂತಿಕೆಯನ್ನು ಸಾಬೀತು ಮಾಡಿಯೇ ತೀರುತ್ತೇನೆ ಎಂಬ ಹಠಕ್ಕೆ ಬೀಳುತ್ತಾನೆ. ಹೀಗಾಗಿಯೇ ಹೊಸ ವರ್ಷದ ಈ ಹೊತ್ತಿನಲ್ಲಿ ಈತನ ಕಥೆ ಕೈಗೆತ್ತಿಕೊಂಡಿದ್ದು.

ಕಾನ್ಫಿಡೆನ್ಸ್ ಅಂದ್ರೆ ಇದು ನೋಡಿ. ವ್ಯುಜಿಕ್, ತನ್ನ ಪಾದಗಳನ್ನು ಬಲವಂತವಾಗಿ ಕೈಗಳನ್ನಾಗಿ ಮಾಡಿಕೊಳ್ಳುತ್ತಾನೆ. ಅದು ಎಷ್ಟರ ಮಟ್ಟಿಗೆ ಅಂದ್ರೆ, ಪುಟ್ಟ ಪಾದಗಳಿಂದ ಬ್ಲೆಡ್ ಹಿಡಿದು ಶೇವ್ ಮಾಡಿಕೊಳ್ಳುತ್ತಾನೆ. ಮುಖದ ಮೇಲೆ ಬ್ಲೇಡಿನ ಒಂದೂ ಗೆರೆಯೂ ಬೀಳದಷ್ಟು ಅದ್ಭುತವಾಗಿ ಶೇವಿಂಗ್ ಮಾಡಿಕೊಳ್ಳುತ್ತಾನೆ. ಹಣಿಗೆ ಹಿಡಿದು ತಲೆ ಬಾಚಿಕೊಳ್ಳುತ್ತಾನೆ. ಹಲ್ಲುಜ್ಜುತ್ತಾನೆ. ಫೋನ್‌ನಲ್ಲಿ ಉತ್ತರಿಸುತ್ತಾನೆ. ನೆನಪಿರಲಿ ಇವನಿಗೆ ಹುಟ್ಟುತ್ತಲೆ ಎರಡೂ ಕೈಗಳು ಇರಲಿಲ್ಲ. ಜೊತೆಗೆ ಕಾಲಿನಲ್ಲೂ ತ್ರಾಣವಿಲ್ಲ!

ನಿಕೋಲಸ್ ಜೇಮ್ಸ್ ವ್ಯುಜಿಕ್ ಎರಡು ಕೈಗಳಿಲ್ಲದ ವ್ಯಕ್ತಿ ಅನ್ನೋದು ಗೊತ್ತಾಗುವ ಹೊತ್ತಿಗೆ ಪುಸ್ತಕದ ಒಂದು ಅಧ್ಯಾಯವಷ್ಟೆ ಮುಗಿಯುವುದು. ಇನ್ನೊಂದು ಅಧ್ಯಾಯ ತಿರುವಿದರೆ, ಅಲ್ಲೊಂದು ಅದ್ಭುತ ಲೋಕವಿದೆ. ನಾವು ನಂಬಲು ಸಾಧ್ಯವಾಗದ ಬದುಕಿನ ಪುಟವಲ್ಲಿ ತೆರೆದುಕೊಳ್ಳುತ್ತದೆ. ವ್ಯುಜಿಕ್ ಕೇವಲ ಕೈ-ಕಾಲುಗಳಿಲ್ಲದ ವ್ಯಕ್ತಿಯಲ್ಲ. ಅದರ ಹೊರತಾಗಿ ಲಕ್ಷಾಂತರ ಜನರಿಗೆ ಸ್ಪೂರ್ತಿ ನೀಡಬಲ್ಲ ಒಬ್ಬ ಶಿಕ್ಷಕ, ಧಾರ್ಮಿಕ ಭೋಧಕ, ಪ್ರಶಸ್ತಿ ಗೆದ್ದ ಸಿನಿಮಾವೊಂದರ ನಟ ಅನ್ನುವ ಕಥೆ ಅಲ್ಲಿದೆ.

ಹಾಗೆ ನೋಡಿದರೆ,  ಪ್ರಾಥಮಿಕ ಶಾಲೆಯಲ್ಲೇ ಇವನ ಸಾಧನೆಯ ಬದುಕು ಆರಂಭವಾಗಿತ್ತು. ೭ನೇ ತರಗತಿಯಲ್ಲಿ ಶಾಲೆಯ ನಾಯಕನಾಗಿ ಆಯ್ಕೆಯಾಗಿದ್ದ. ಶಾಲೆಗಾಗಿ ನಿಧಿ ಸಂಗ್ರಹಿಸಿ, ವಿಕಲಾಂಗರ ಆಂದೋಲನ ಶುರು ಮಾಡಿದ್ದ. ೧೭ ವರ್ಷದಲ್ಲಿ ತನ್ನ ಗೆಳೆಯರ ಗುಂಪಿಗೆ ಭೋಧನೆ ನೀಡಲು ಶುರುವಿಡುತ್ತಾನೆ. ವಿಕಲಾಂಗರ ಸೇವೆಗಾಗಿ ‘ಲೈಫ್ ವಿಥೌಟ್ ಲಿಂಬ್ಸ್ (ಕೈಗಳಿಲ್ಲದ ಬದುಕು)’ ಎಂಬ ಎನ್‌ಜಿಒ ಹುಟ್ಟು ಹಾಕುತ್ತಾನೆ. ವಿಕಲಾಂಗರಿಗೆ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತಾನೆ. ಇಷ್ಟಕ್ಕೆ ಇವನ ಬದುಕು ಸೀಮಿತವಾಗುವುದಿಲ್ಲ. ದೇವರಲ್ಲಿ ನಂಬಿಕೆಯುಳ್ಳ ಈತ, ಒಬ್ಬ ಅದ್ಭುತ ಧಾರ್ಮಿಕ ಪ್ರವಚನಕಾರನೂ ಹೌದು. ಜೊತೆಗೆ ಇತರಿಗೆ ಸ್ಪೂರ್ತಿ ನೀಡಬಲ್ಲ ವಾಗ್ಮಿ.

೨೧ನೇ ವರ್ಷಕ್ಕೆ ಗ್ರಿಫೀತ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆಯುತ್ತಾನೆ. ಅಕೌಂಟಿಂಗ್ ಮತ್ತು ಫೈನಾನ್ಷಿಯಲ್ ಪ್ಲಾನಿಂಗ್ ೨ ಪ್ರಮುಖ ವಿಷಯಗಳಲ್ಲಿ ಪದವಿ ಪಡೆದ ನಂತ್ರ, ಬದುಕನ್ನು ಇತರರಿಗೆ ಸ್ಪೂರ್ತಿ ನೀಡಲು ಮುಡುಪಾಗಿಡುವ ನಿರ್ಧಾರ ಮಾಡುತ್ತಾನೆ. ಅಲ್ಲಲ್ಲಿ ಭಾಷಣ ನೀಡಲು ಆರಂಭಿಸುತ್ತಾನೆ. ಜೊತೆಗೆ ತಾನೂ ಕಲಿತ ವಿದ್ಯೆಯನ್ನು ತನ್ನ ವ್ಯವಹಾರದಲ್ಲಿ ಬಳಸಿಕೊಳ್ಳುತ್ತಾನೆ.

ಇವನ ಸ್ಪೂರ್ತಿಯುತ ಮಾತು ಸಕ್ಕತ್ ಪ್ರಸಿದ್ಧವಾಗುತ್ತೆ. ಬಾಯಿ ಇದ್ದರೆ ತಾಯಿ ಇದ್ದಹಾಗೆ ಎಂಬ ಮಾತು ಇವನ ಬದುಕಿನಲ್ಲಿ ಅಕ್ಷರಶಃ ಸತ್ಯವಾಗುತ್ತೆ. ಕಂಪ್ಯೂಟರ್ ಪರದೆ ಬಳಸಿಕೊಂಡು, ಕಾಲಿನಲ್ಲಿ ಸರ್ಕಸ್ ಮಾಡುತ್ತಾ ಪ್ರೆಸೆಂಟೇಷನ್ ನೀಡುತ್ತಾನೆ. ಮಾತಾಡುತ್ತಲೇ ೫ ಖಂಡಗಳಿಗೆ ಭೇಟಿ ನೀಡುತ್ತಾನೆ. ಕಾರ್ಪೊರೇಟ್ ಜಗತ್ತಿನಿಂದ ಸ್ಲಂ ಜನರನ್ನೂ ಉದ್ದೇಶಿಸಿ ಭಾಷಣ ಮಾಡುತ್ತಾನೆ. ಈವರೆಗೆ ಒಟ್ಟು ೨೪ ದೇಶಗಳನ್ನು ಸುತ್ತಿದ ಈತ, ೩೦ ಲಕ್ಷ ಮಂದಿಗೆ ಸ್ಪೂರ್ತಿ ತುಂಬಿದ್ದಾನೆ. ಹೀಗಾಗಿ ೨೦೦೫ರಲ್ಲಿ ಯಂಗ್ ಆಸ್ಟ್ರೇಲಿಯನ್ ಆಫ್ ಈಯರ್ ಎಂಬ ಗೌರವ ಇವನಿಗೆ ಲಭಿಸುತ್ತದೆ.

ನಂಬಲಿಕ್ಕೆ ಕಷ್ಟವಾಗಬಹುದು. ಆದ್ರೆ ನಂಬಲೇ ಬೇಕು. ಕೈಗಳಿಲ್ಲದ ಈತ ಬರೆದ ಈ ಪುಸ್ತಕ ಬರೋಬ್ಬರಿ ೨೦೦ ಪುಟವಿದೆ. ಅಮೆಜಾನ್ ಅಂತರ್ಜಾಲ ತಾಣದಲ್ಲಿ ಪುಸ್ತಕ ಪಿಡಿಎಫ್ ಇಡಿ-ಇಡಿಯಾಗಿ ಲಭ್ಯವಿದೆ. ಈ ಪುಸ್ತಕ ೨೦೧೦ರಲ್ಲಿ ಪ್ರಕಟವಾಗುತ್ತೆ.
ಒಂದು ಪುಸ್ತಕ, ಒಂದು ಭಾಷಣಕ್ಕೆ ಇವನ ಬದುಕು ಸೀಮಿತವಾಗುವುದಿಲ್ಲ. ಹಾಗಾಗಿಯೇ ಆತ ‘ಲೈಫ್ ವಿಥೌಟ್ ಲಿಮಿಟ್ಸ್’ ಅನ್ನೋ ಪುಸ್ತಕ ಬರೆದಿರಬೇಕು! ಓದಿನಿಂದಾಗಿ ವ್ಯವಹಾರ ಚತುರತೆ ಅನ್ನೋದು ಈತನಿಗೆ ಕರಗತವಾಗಿದೆ. ತನ್ನ ಭಾಷಣದ ಸಂಗ್ರಹಗಳನ್ನು ಡಿವಿಡಿ ಮಾಡಿಸಿ ಮಾರ್ಕೆಟಿಂಗ್ ಮಾಡುತ್ತಾನೆ. ಅದ್ರಲ್ಲಿ ಬಂದ ಹಣದಿಂದ ಮತ್ತಷ್ಟು ದೇಶ ಸುತ್ತುತ್ತಾನೆ. ಈ ಡಿವಿಡಿಯ ದ್ವಿತೀಯ ಭಾಗ ಬ್ರಿಸ್‌ಬೈನ್ ಚರ್ಚ್‌ನಲ್ಲಿ ಚಿತ್ರೀಕರಣವಾಗುತ್ತೆ.

ಬದುಕು ಇನ್ನೂ ವಿಶಾಲವಾಗಿದೆ ಅನ್ನಿಸಲು ಶುರುವಾಗುತ್ತೆ. ಮತ್ತೇನಾದರೂ ಮಾಡಬೇಕು ಎಂಬ ಹಪ-ಹಪಿತನ ಹುಟ್ಟುತ್ತೆ. ‘ಲೈಫ್ ಗ್ರೇಟರ್ ಪರ್ಪಸ್’ ಎಂಬ ಕಿರುಚಿತ್ರ ನಿರ್ಮಿಸುತ್ತಾನೆ. ೨೦೦೫ರಲ್ಲಿ ನಿರ್ಮಾಣಗೊಂಡ ಪುಟ್ಟ ಡಾಕ್ಯುಮೆಂಟರಿ, ವ್ಯುಜಿಕ್ ಮನೆಯ ಬದುಕು ಮತ್ತು ಇತರೆ ನಿತ್ಯದ ಚಟುವಟಿಕೆಗಳನ್ನು ಒಳಗೊಂಡಿದೆ. ಕೈಗಳು ಇಲ್ಲದೆ ತಾನೂ ಹೇಗೆ ಬದುಕುತ್ತಿರುವೆ, ತನ್ನ ಕೆಲಸಗಳನ್ನು ಹೇಗೆ ಮಾಡಿಕೊಳ್ಳುತ್ತಿದ್ದೇನೆ ಎಂಬುದನ್ನು ಇದರಲ್ಲಿ ತೋರಿಸಿದ್ದಾನೆ. ಇದನ್ನು ಕೂಡ ಮಾರ್ಕೆಟಿಂಗ್ ಮಾಡಿ, ಇಲ್ಲಿಂದ ಬಂದ ಹಣವನ್ನು ಇತರೆ ಚಟುವಟಿಕೆಗಳಿಗೆ ತೊಡಗಿಸುತ್ತಾನೆ

ಇವನಿಗೆಂಥ ತಲುಬಿರಬಹುದು ಅನ್ನಿಸದೇ ಇರಲು ಸಾಧ್ಯವೇ ಇಲ್ಲ, ಇವನ ಸಾಹಸಗಳನ್ನು ನೋಡಿದ್ರೆ. ಹಾಗಂತ ಇವನ ತಲುಬು ಇಷ್ಟಕ್ಕೆ ನಿಲ್ಲುವುದಿಲ್ಲ. ಸಿನಿಮಾದ ಸಾಹಸಕ್ಕೂ ಕೈ ಹಾಕುತ್ತಾನೆ. ಒಂದಷ್ಟು ಗೆಳೆಯರ ಸಹಕಾರ ಪಡೆದು ‘ದಿ ಬಟರ್‌ಫ್ಲೈ ಸರ್ಕಸ್’ ಎಂಬ ಕಿರುಚಿತ್ರ ನಿರ್ಮಿಸುತ್ತಾನೆ. ಅದರಲ್ಲಿ ನಟಿಸುತ್ತಾನೆ. ಈ ಚಿತ್ರದಲ್ಲೊಂದು ಅದ್ಭುತ ಸನ್ನಿವೇಶವಿದೆ. ವ್ಯುಜಿಕ್‌ನ ಒಂದಷ್ಟು ಗೆಳೆಯರು ಕೆರೆಯಲ್ಲಿ ಈಜುತ್ತಿರುತ್ತಾರೆ. ವ್ಯುಜಿಕ್‌ಗೆ ಈಜಬೇಕು ಅಂತಾ ಆಸೆಯಾಗುತ್ತೆ. ಆದರೆ, ದಂಡೆಯಿಂದ ಕೆರೆಗೆ ದುಮುಕಲು ಮರದ ದಿಮ್ಮಿಗಳು ಅಡ್ಡಗಾಲಾಗಿರುತ್ತವೆ. ಗೆಳೆಯನ ಬಳಿ ಕೆರೆಗೆ ತಲುಪಿಸು ಎಂದರೆ, ಆತ ಇವನ ಮಾತನ್ನು ಗಮನಿಸುವುದೇ ಇಲ್ಲ. ಹಾಗಂತ ವ್ಯುಜಿಕ್ ಬೇಸರಗೊಳ್ಳುವುದಿಲ್ಲ. ಸುಮ್ಮನೆ ನಸು ನಕ್ಕು, ತಾನೇ ಮರದ ದಿಮ್ಮಿಗಳನ್ನು ದಾಟಲು ಹೊರಡುತ್ತಾನೆ. ಅದನ್ನು ನೋಡುತ್ತಿದ್ದರೆ, ನೋಡುಗರಾದ ನಮಗೆ ಎದೆ ಡವ, ಡವ ಅನ್ನುತ್ತಿರುತ್ತದೆ. ಎಲ್ಲಿ ಆತನ ಬಿದ್ದು ಬಿಡುತ್ತಾನೋ ಎಂಬ ಆತಂಕ ಕಾಡುತ್ತದೆ. ಯಸ್, ಅಂದುಕೊಂಡಂತೆ ಬೀಳುತ್ತಾನೆ. ಒಂದಲ್ಲ, ಎರಡಲ್ಲ, ಮೂರು ಸಲ ಬೀಳುತ್ತಾನೆ. ಆದರೂ ಪ್ರಯತ್ನ ಬಿಡುವುದಿಲ್ಲ. ಅಂತಿಮವಾಗಿ ಪುಟ್ಟ ಪಾದಗಳನ್ನು ಬಳಸಿ ಮರದ ದಿಮ್ಮಿಗಳನ್ನು ದಾಟಿ ಕೆರೆ ತಲುಪುತ್ತಾನೆ. ಕೆರೆಯಲ್ಲಿ ಈಜಿ ಸಂಭ್ರಮಿಸುತ್ತಾನೆ. ಈ ದೃಶ್ಯ ನೋಡುತ್ತಿದ್ದ ನಮ್ಮ ಕಣ್ಣಂಚಿನಲ್ಲಿ ಆನಂದದ ಹನಿಗಳು ಉದುರುತ್ತವೆ. ನಾವೇ ಬದುಕಿನಲ್ಲಿ ಗೆದ್ದಷ್ಟು ಸಂಭ್ರಮವಾಗುತ್ತದೆ.

ಅಂದುಕೊಂಡಂತೆ ಈ ಚಿತ್ರ ಗೆಲ್ಲುತ್ತೆ. ೨೦೦೯ರಲ್ಲಿ ಈ ಚಿತ್ರಕ್ಕಾಗಿ ಪ್ರಶಸ್ತಿ ಗೆಲ್ಲುತ್ತಾನೆ. ಜೊತೆಗೆ ಅತ್ಯುತ್ತಮ ನಟ ಎಂಬ ಗೌರವಕ್ಕೆ ವ್ಯುಜಿಕ್ ಪಾತ್ರನಾಗುತ್ತಾನೆ. ಇದಾದ ನಂತರ ಆತ ಮಾಡಿದ ಪ್ರಯತ್ನ ‘ಸಮ್‌ಥಿಂಗ್ ಮೋರ್’ ಎಂಬ ಮ್ಯೂಸಿಕ್ ವೀಡಿಯೊ. ಇದನ್ನು ಮಾರ್ಕೆಟಿಂಗ್ ಮಾಡಲು ಶುರುವಿಡುತ್ತಾನೆ. ಅಂತರ್ಜಾಲ ಜಗತ್ತಿನ ಯೂಟ್ಯೂಬ್‌ನಲ್ಲಿ ಇದೊಂದು ಬಹು ಜನಪ್ರಿಯ ವೀಡಿಯೊ.

ಉಸ್ಸಪ್ಪೋ ಅಂದ್ರಾ ಇವ್ನ ಬದುಕಿನ ಕಥೆ ಕೇಳಿ…ನೋ ಆರ್ಮ್ಸ್, ನೊ ಲೆಗ್ಸ್, ನೊ ವರೀಸ್ ಎಂಬ ಧ್ಯೇಯದೊಂದಿಗೆ ಯುವಕರಿಗಾಗಿ ಕೆಲ್ಸ ಮಾಡ್ತಾ ಇರೋ ಇವನಿಗಿನ್ನೂ ಕೇವಲ ೩೦ ವರ್ಷ. ಬದುಕಿನುದ್ದಕ್ಕೂ ಅದಿನ್ನು ಏನೇನು ಮಾಡ್ತಾನೋ ಗೊತ್ತಿಲ್ಲ. ಯಾಕಂದ್ರೆ ಇವನ ಬದುಕಿಗೆ ಮಿತಿಯಿಲ್ಲ..! ನಿಜ, ಛಲವಿದ್ದರೆ ಯಾರ ಬದುಕಿಗೂ ಮಿತಿಯಿಲ್ಲ. ಸಾಧನೆಗೆ ಏನು ಬೇಕಾಗಿಲ್ಲ. ಕೈಗಳು ಇಲ್ಲದ ಈತನೇ ಈ ಪರಿ ಸಾಹಸ ಮಾಡಿರುವಾಗ, ಎಲ್ಲವೂ ಇರುವ ನಾವು ಒಂದೆರಡು ವಿಷಯಗಳಲ್ಲಿ ಫೇಲಾದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಿಲ್ಲ. ಪ್ರೇಯಸಿ ಕೈಕೊಟ್ಟಳು ಎಂಬ ಕಾರಣಕ್ಕಾಗಿ ಸಾಯಬೇಕಿಲ್ಲ. ಹಾಗೆ ಸತ್ತರೆ ಅವರು ಹೇಡಿಗಳು, ಮುರ್ಖರು ಎಂಬುದನ್ನು ವ್ಯುಜಿಕ್ ನಿರೂಪಿಸಿದ್ದಾನೆ. ಅವನ ಕಥೆ ನಿಮ್ಮ ಬದುಕಿಗೂ ಸ್ಪೂರ್ತಿಯಾಬಹುದು ಅಲ್ವಾ?

(ಸೂಚನೆ:ಜ.೧ರಂದು ಕನ್ನಡಪ್ರಭದಲ್ಲಿ ಪ್ರಕಟಿತ ನನ್ನ ಬರಹ)

ಚಂಪಾ ಷಷ್ಠಿಯ ವೇಳೆ ಕುಕ್ಕೆ ಸುಬ್ರಮಣ್ಯದಲ್ಲಿ ನಡೆಯುವ ಮಡೆ ಸ್ನಾನ ಸೇವೆ ರದ್ದು ಮಾಡಬಾರದು ಎಂದು ಪಟ್ಟು ಹಿಡಿದಿದ್ದು ಸ್ಥಳೀಯರು. ಮಡೆಸ್ನಾನಕ್ಕೆ ಅವಕಾಶ ಕೊಡಬೇಕು. ಇಲ್ಲವಾದರೆ ರಥ ಕಟ್ಟುವುದಿಲ್ಲ ಎಂದು ಹಠ ಹಿಡಿದವರು ಮಲೆಕುಡಿಯ ಜನಾಂಗದವರು. ಮೇಲ್ಜಾತಿಯವರ ಉಂಡ ಎಂಜಲು ಎಲೆಯಲ್ಲಿ ಕೆಳಜಾತಿಯವರು ಉರುಳುತ್ತಾರೆ. ಹೀಗಾಗಿ ಮಡೆಸ್ನಾನ ವಿರೋಧಿಸುತ್ತೇವೆ ಎಂಬುವವರು ಇದನ್ನು ಸ್ಪಷ್ಟವಾಗಿ ಗಮನಿಸಬೇಕು…

ತಂಬಾಕು ಸೇವನೆ ಆರೋಗ್ಯ ಹಾನಿಕರ…ಹಾಗಂತ ಸಿಗರೇಟು ಪ್ಯಾಕಿನ ಮೇಲೆ ದಪ್ಪ ಅಕ್ಷರದಲ್ಲಿ ಬರೆದಿರುತ್ತದೆ. ಸಿಗರೇಟು ಸೇದುವ ಎಲ್ಲರೂ ಕೂಡ ಅದನ್ನು ಓದಿರುತ್ತಾರೆ. ಆದಾಗ್ಯೂ ಧೂಮಪಾನ ಬಿಡುವುದಿಲ್ಲ. ಇದಕ್ಕೂ ಮಜ ಎಂದರೆ, ಕ್ಯಾನ್ಸರ್‌ಗೆ ಔಷಧ ನೀಡುವ ವೈದ್ಯನಿಗೂ ಸಿಗರೇಟಿನ ಚಟವಿರುವುದು!

ಅಯ್ಯೊ, ನೀವು ತಿನ್ನುವ ದ್ರಾಕ್ಷಿಯಲ್ಲಿ ರಾಸಾಯನಿಕ ಇರುವುದಿಲ್ಲವಾ? ಈಗಿನ ಆಹಾರಗಳು ಕಲುಷಿತ ಅಲ್ಲವಾ? ಸಾವಿಗೆ ಕಾರಣವಿಲ್ಲ. ತಂಬಾಕು ಸೇವನೆಯೂ ಸಾವಿಗೊಂದು ಮಾರ್ಗವಾಗಬಹುದು. ಹಾಗಂತ ಸೇವಿಸಿದವರಿಗೆಲ್ಲ ಕ್ಯಾನ್ಸರ್ ಬರುತ್ತದೆ ಎನ್ನಲು ಸಾಧ್ಯವಿಲ್ಲ ಅನ್ನೋದು ಸಿಗರೇಟು ಸೇದುವ ಒಕ್ಕೂಟದ ಸಮರ್ಥನೆ! ಇನ್ನೂ ಆಲ್ಕೊಹಾಲಿನ ವಿಷಯವೂ ಹಾಗೆ, ಆರೋಗ್ಯಕ್ಕೆ ಹಾನಿ ಎಂಬುದು ತಿಳಿದಿದ್ದರೂ ಸೇವಿಸುತ್ತಾರೆ. ಅದರಿಂದ ಅವರಿಗೆ ಮಾನಸಿಕ ನೆಮ್ಮದಿ ಸಿಗುತ್ತದೆಯಂತೆ! ಬದುಕಿನ ಒತ್ತಡ ಕಡಿಮೆಯಾಗುತ್ತದೆಯಂತೆ!

ಹೌದು, ಇದರಂತೆ ಮಡೆಸ್ನಾನ ಎಂಬುದು ಕೂಡ. ಎಂಜಲೆಲೆಯ ಮೇಲೆ ಉರುಳಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಅನಾದಿ ಕಾಲದಿಂದಲೂ ಇದೆ. ಬ್ರಾಹ್ಮಣರು ಊಟ ಮಾಡಿದ ಎಂಜಲು ಎಲೆಯ ಮೇಲೆ ದಲಿತರು, ಕೆಳವರ್ಗದವರು ಉರುಳಾಡುತ್ತಾರೆ. ಹಾಗಾಗಿ ಮಡೆಸ್ನಾನ ನಿಷೇಧಿಸಬೇಕು ಎಂಬ ಕೂಗು ಕೇಳಿಬರುತ್ತಿದೆ. ಆದರೆ ಇದೊಂದು ಪೂರ್ವಾಗ್ರಹ ಪೀಡಿತ ಕೂಗು. ಮಡೆಸ್ನಾನದಲ್ಲಿ ಎಲ್ಲ ಜನಾಂಗದವರು ಎಂಜಲು ಎಲೆಯ ಮೇಲೆ ಉರುಳುತ್ತಾರೆ. ಇದು ಅರಿವಾಗಬೇಕಾದರೆ, ಹಾಗೆ ಕೂಗುವವರು ಕುಕ್ಕೆಗೆ ಹೋಗಿ ನೋಡಿ ಬರಬೇಕು. ನಾಗನಿಗೆ ಪ್ರಸಿದ್ಧವಾಗಿರುವ ಕುಕ್ಕೆ ಕ್ಷೇತ್ರದಲ್ಲಿ ಚಂಪಾ ಷಷ್ಠಿಯ ಸಮಯದಲ್ಲಿ ೩ ದಿನಗಳ ಕಾಲ ವಿಶೇಷ ಪೂಜೆ ನಡೆಯುತ್ತದೆ. ಈ ವೇಳೆಯಲ್ಲಿ ಮಡೆಸ್ನಾನ ಎಂಬ ವಿಶಿಷ್ಠ ಸೇವೆ ನಡೆಯುತ್ತದೆ.

ಇದಕ್ಕೆ ೫೦೦ ವರ್ಷಗಳ ಇತಿಹಾಸವಿದೆ ಎಂಬುದು ಬಲ್ಲವರ ಮಾತು. ದೇವಳದಲ್ಲಿ ಅನೇಕ ಕೆಲಸ ನಿಭಾಯಿಸುವ ಮಲೆಕುಡಿಯ ಜನಾಂಗದಿಂದಲೇ ಈ ಸೇವೆ ಆರಂಭವಾಗಿದ್ದು ಎಂಬುದು ಕೆಲವರ ವಾದ. ಸಂತಾನ ಪ್ರಾಪ್ತಿ, ಚರ್ಮ ಸಂಬಂಧಿ ರೋಗಗಳಿಗೆ ನಾಗ ಪ್ರಸಿದ್ಧ ದೇವರು. ಅದಕ್ಕೆ ವೈಜ್ಞಾನಿಕ ಕಾರಣ ಇಲ್ಲವಾಗಿರಬಹುದು. ಆದರೆ ಅನಾದಿ ಕಾಲದಿಂದಲೂ ನಮ್ಮ ನಂಬಿಕೆ. ನಾಗದೋಷವಿದ್ದರೆ ಸಂತಾನ ಪ್ರಾಪ್ತಿ ಆಗುವುದಿಲ್ಲ. ನಾಗನ ತೊಂದರೆಯಿಂದ ಕಜ್ಜಿ, ತುರಿಕೆ ಮತ್ತು ಇತರೆ ಚರ್ಮ ಸಂಬಂಧಿ ಕಾಯಿಲೆಗಳು ಬರುತ್ತವೆ ಎಂಬ ಬಲಾಢ್ಯ ನಂಬಿಕೆ ಗ್ರಾಮೀಣ ಭಾಗದಲ್ಲಿ ಇದೆ. ಇದರ ವಿಮೋಚನೆಗಾಗಿ ಮಡೆಸ್ನಾನ ಹುಟ್ಟಿರಬಹುದು.

ಹಾಗಾಗಿಯೇ ಚಂಪಾ ಷಷ್ಠಿಯಂದು ನಡೆಯುವ ಈ ಸೇವೆ ರದ್ದಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು. ಮಡೆಸ್ನಾನಕ್ಕೆ ಅವಕಾಶ ಕೊಡಬೇಕು ಅಂತ ಪಟ್ಟು ಹಿಡಿದು ರಥ ಕಟ್ಟದೆ ಕುಳಿತ್ತಿದ್ದು. ಸರಕಾರದ ನಿಷೇಧ ವಾಪಸ್ ತೆಗೆಸಿ, ೬೦೦ಕ್ಕೂ ಹೆಚ್ಚು ಭಕ್ತರು ಸೇವೆ ಸಲ್ಲಿಸಿದ್ದು. ಮೇಲ್ಜಾತಿ ಎಂಜಲು ಎಲೆಯಲ್ಲಿ ಕೆಳಜಾತಿಯವರು ಉರುಳುತ್ತಾರೆ. ಹೀಗಾಗಿ ಮಡೆಸ್ನಾನ ವಿರೋಧಿಸುತ್ತೇವೆ ಎಂಬುದು ಕೆಲವರ ವಾದ. ಈ ಸಂಪ್ರದಾಯ ಮುಂದುವರಿಯಬೇಕು. ಇಲ್ಲವಾದರೆ ನಾವು ರಥ ಕಟ್ಟುವುದಿಲ್ಲ ಅಂತ ನಿನ್ನೆ ಪಟ್ಟು ಹಿಡಿದಿದ್ದು ಮಲೆಕುಡಿಯ ಜನಾಂಗದವರು ಹೊರತು, ಮೇಲ್ಜಾತಿಯವರಲ್ಲ ಎಂಬುದು ಇಲ್ಲಿ ಪ್ರಮುಖ ಅಂಶವಾಗುತ್ತದೆ.

ಕಷ್ಟಗಳ ನಿವಾರಣೆಗೆ ಹರಕೆ ಹೊತ್ತುಕೊಳ್ಳುವುದು ಭಾರತೀಯ ಸಂಪ್ರದಾಯದಲ್ಲಿನ ಅವಿಭಾಜ್ಯ ಅಂಗ. ಈ ಹರಕೆಗಳಲ್ಲಿ ಹಲವು ವಿಧ. ಪ್ರದೇಶದಿಂದ ಪ್ರದೇಶಕ್ಕೆ, ಆಚರಣೆಗಳಿಗೆ ಅನುಗುಣವಾಗಿ ಹರಕೆಗಳು ಭಿನ್ನ. ಆರಾಧನೆಯೂ ವಿಚಿತ್ರ. ಒಂದೊಂದು ಭಾಗದಲ್ಲಿ ಒಂದೊಂದು ದೈವದ ಪ್ರಭಾವ ಹೆಚ್ಚು. ಇನ್ನೂ ಒಂದೊಂದು ಜಾತಿಗೂ ಅದರದ್ದೆ ಆದ ದೇವರಿದೆ. ಅವರದ್ದೇ ಆದ ಮಠಗಳಿವೆ. ಹೀಗಾಗಿ ಎಲ್ಲರ ದೈವ ಆರಾಧನೆಯೂ ಏಕೀಕೃತವಾಗಿರಬೇಕು ಎಂದು ಭಾರತದಂಥ ರಾಷ್ಟ್ರದಲ್ಲಿ ಬಯಸುವುದು ತಪ್ಪು. ನೀವು ಉಡುಪಿಗೆ ಬಂದರೆ ಅಲ್ಲೊಂದು ವಿಶಿಷ್ಠ ಆಚರಣೆ ಇದೆ. ಶ್ರೀಕೃಷ್ಣ ಮಠದ ಭೋಜನ ಶಾಲೆಯಲ್ಲಿ ಖಾಲಿ ನೆಲದ ಮೇಲೆ ಊಟ ಮಾಡುವುದು. ಹೆಚ್ಚಾಗಿ ಶನಿವಾರ ನೆಲದ ಮೇಲೆ ಊಟ ಮಾಡುವ ಅನೇಕರು ಇಲ್ಲಿ ಕಾಣ ಸಿಗುತ್ತಾರೆ. ಮುಖ್ಯಪ್ರಾಣನಿಗೆ ಇದೊಂದು ರೀತಿಯ ಸೇವೆಯಂತೆ. ಬಾಳೆ ಎಲೆಯಲ್ಲಿ ಊಟ ಮಾಡುವವರ ನಡುವೆಯೇ ಬರಿ ನೆಲದ ಮೇಲೆ ಊಟ ಮಾಡುವ ಅನೇಕರು ಸಿಗುತ್ತಾರೆ. ಉತ್ತರ ಕರ್ನಾಟಕ, ಮಲೆನಾಡು ಭಾಗದಿಂದ ಹೋದವರಿಗೆ ಇದೊಂದು ರೀತಿಯ ಮುರ್ಖ ಆಚರಣೆ ಅನ್ನಿಸುತ್ತದೆ. ಆದರೆ, ದಕ್ಷಿಣಕನ್ನಡದ ಮಂದಿ ಜಾತಿ, ಅಂತಸ್ತಿನ ಭಿನ್ನತೆಯಿಲ್ಲದೆ ಈ ಸೇವೆ ಸಲ್ಲಿಸುತ್ತಾರೆ. ಅದು ಅಲ್ಲಿನ ನಂಬಿಕೆ. ಅಂದಹಾಗೆ ಇದೊಂದು ಸೇವೆಯಷ್ಟೆ. ಅಷ್ಟ ಮಟ್ಟದ ಸೇವಾ ಪಟ್ಟಿಯಲ್ಲಿ ಈ ಸೇವೆಯಿಲ್ಲ. ಇದಕ್ಕೆ ಯಾವುದೇ ರೀತಿಯ ಶುಲ್ಕವಿಲ್ಲ.

ಹಾಗೆ ಮಡೆಸ್ನಾನದ ವಿಚಾರ. ಇದೊಂದು ತೀರಾ ವೈಯಕ್ತಿಕ ಮಟ್ಟದ ಸೇವೆ. ಕುಕ್ಕೆಯ ಸೇವೆಗಳ ಪಟ್ಟಿಯಲ್ಲಿ ಇದರ ಹೆಸರಿಲ್ಲ. ಜೊತೆಗೆ ಇದಕ್ಕೆ ಎಂದು ವಿಶೇಷ ಪೂಜೆಯೂ ಇಲ್ಲ. ವೈಯಕ್ತಿಕವಾಗಿ ನಿಮಗೆ ನಂಬಿಕೆ ಇದ್ದರೆ ಈ ಸೇವೆ ಸಲ್ಲಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಬದುಕಿನ ಯಾವುದೋ ಕಷ್ಟ ಪರಿಹಾರಕ್ಕಾಗಿ ಹರಕೆ ಹೊತ್ತವರೇ ಈ ಸೇವೆ ಮಾಡುವುದು. ಅವರು ಅಂದುಕೊಂಡಿದ್ದು ಸಿದ್ಧಿಸಿದೆ ಎಂಬ ಕಾರಣಕ್ಕಾಗಿ ದೇವರಿಗೆ ತಿರುಗಿ ಅವರು ಅರ್ಪಿಸುವ ಕಾಣಿಕೆಯ ವರ್ಗದಲ್ಲಿ ಮಡೆಸ್ನಾನವನ್ನು ಸೇರಿಸಬಹುದು. ಆತನಿಗೆ ಒಳಿತು ಆಗದೆ ಸುಮ್ಮನೆ ಈ ಕಾಣಿಕೆ ನೀಡುತ್ತಾನಾ?

ನೀವು ಮಲೆನಾಡಿಗೆ ಬಂದರೆ ಯಕ್ಷಿ, ಚೌಡಿ, ಭೂತದಂಥ ಒಂದಷ್ಟು ಗ್ರಾಮ್ಯದೇವತೆಗಳಿವೆ. ಕರಾವಳಿಯಲ್ಲಿ ಪಂರ್ಜುಲಿ, ಕಲ್ಲುಕುಟುಕ ಎಂಬುದಾಗಿದೆ. ಈ ದೇವತೆಗಳಿಗೆ ಕುರಿ, ಕೋಳಿಯ ಬಲಿಯಾಗಬೇಕು. ರಕ್ತದ ಅಭಿಷೇಕ ಮಾಡಬೇಕು. ದೀಪಾವಳಿಯಲ್ಲಿ ತೆಂಗಿನಕಾಯಿ ಒಡೆಯುವ ಒಂದು ವರ್ಗವಿದ್ದರೆ, ಕೋಳಿ ಬಲಿ ಕೊಡುವ ಮತ್ತೊಂದು ವರ್ಗವಿದೆ. ಎರಡನ್ನು ಈ ದೇವರು ಸ್ವೀಕರಿಸುತ್ತದೆಯೋ, ಬಿಡುತ್ತದೆಯೊ ನಂತರದ ಪ್ರಶ್ನೆ. ಆದರೆ ಇದು ಅಲ್ಲಿನ ನಂಬಿಕೆ. ದೀಪಾವಳಿಗೆ ಕೋಳಿ ಬಲಿಯಾಗದಿದ್ದರೆ ಅನಾರೋಗ್ಯ, ತೊಂದರೆ ಉಂಟಾಗುತ್ತದೆ ಎಂಬ ಭಯ ಇವತ್ತಿಗೂ ಇದೆ. ಆಕಸ್ಮಿಕವಾಗಿ ಮನೆಯಲ್ಲಿ ಯಾರಿಗಾದರು ಜ್ವರ ಬಂದರೆ, ಅದು ಯಕ್ಷಿಯ ಸಮಸ್ಯೆಯೆಂದು ಭಾವಿಸುವವರು ಈಗಲೂ ಪ್ರಸ್ತುತ.

ಬೆಂಗಳೂರಿನಲ್ಲಿ ಕಾರ್ಯಸಿದ್ಧಿ ಆಂಜನೇಯ ಅಂತ ಒಂದು ದೇವಾಲಯವಿದೆ. ಇಲ್ಲಿ ಏನಾದರೂ ಅಂದುಕೊಂಡು ಕಾಯಿ ಕಟ್ಟಿದರೆ, ಅಂದುಕೊಂಡಿದ್ದು ಸಿದ್ಧಿಸುತ್ತದೆಯಂತೆ. ನಮ್ಮಂಥ ತಲೆಹರಟೆಗಳು ಭಾರತದಲ್ಲಿ ಜಾತಿ ಪದ್ಧತಿ ನಿರ್ಮೂಲನೆ ಆಗಲಿ ಎಂದು ಕಾಯಿ ಕಟ್ಟುತ್ತೇವೆ! ಅದು ಸಿದ್ಧಿಸುವುದಿಲ್ಲ. ದೇವರ ಪರೀಕ್ಷೆ ಮಾಡಬಾರದು ಎಂದು ಪುರೋಹಿತರ ಆದೇಶ ಬರುತ್ತದೆ! ಹಾಗಂತ ಒಂದು ಇಷ್ಟಾರ್ಥ ಸಿದ್ಧಿಸಿಲ್ಲ ಅಂತಾ ಈ ಪದ್ಧತಿ ಸರಿಯಿಲ್ಲ ಅನ್ನಲು ಸಾಧ್ಯವಿಲ್ಲ ಅಲ್ಲವೆ? ಒಮ್ಮೆ ಸರಿಯಿಲ್ಲದಿದ್ದರೆ ಪ್ರತಿನಿತ್ಯ ನೂರಾರು ಮಂದಿ ಅಲ್ಲಿ ಕಾಯಿ ಕಟ್ಟುತ್ತಿದ್ದರಾ?

ಅಸಹ್ಯ ಅನ್ನಿಸುವ ಈ ಸೇವೆ ಮಾಡದಿದ್ದರೆ ಏನಾಗುತ್ತದೆ ಅನ್ನಬಹುದು ನೀವು. ಬೆಂಗಳೂರಿನ ಕೃಷಿ ಮಾರುಕಟ್ಟೆ ಬಳಿ ಒಂದು ಮೈದಾನವಿದೆ. ಬಕ್ರೀದ್ ಹಿಂದಿನ ಅಲ್ಲಿ ಹೋದರೆ ನೀವು ಕಂಗಾಲಾಗಿ ನಿಲ್ಲುತ್ತೀರಿ. ಅಲ್ಲಿನ ಕೂಗುವ ಕುರಿಗಳನ್ನು ಕಂಡು ಕರುಳು ಕರಗುತ್ತದೆ. ಹಾಗಂತ ಅದನ್ನು ವಿರೋಧಿಸಲು ಸಾಧ್ಯವಿಲ್ಲ. ಕುರಿ ಕಡಿಯುವುದನ್ನು ನಿಷೇಧಿಸಿ ಅಂತಾ ಬೀದಿಗೆ ಇಳಿಯುವುದಿಲ್ಲ. ಬದಲಾಗಿ ಗೋ ಹತ್ಯೆ ನಿಷೇಧ ವಿರೋಧಿಸಿ ಬೀದಿಗಿಳಿಯುತ್ತೇವೆ. ಟೌನ್‌ಹಾಲ್ ಎದುರು ಗೋಮಾಂಸ ತಿಂದು ಪ್ರತಿಭಟಿಸುತ್ತೇವೆ. ಇಲ್ಲಿ ಮಾನವೀಯತೆ ಆರಿ ಹೋಗುತ್ತದೆ. ಯಾಕೆಂದರೆ ಅವೆಲ್ಲ ಪ್ರತಿಭಟಿಸಲು ಸಾಧ್ಯವಿಲ್ಲ ಮೂಕಪ್ರಾಣಿಗಳು…

ಹೌದು, ಬಕ್ರೀದ್ ದಿನ ಕುರಿ ಕಡಿಯುವುದು ಮುಸ್ಲಿಂರ ನಂಬಿಕೆ. ದೀಪಾವಳಿಗೆ ಕೋಳಿ ಬಲಿ ಹಿಂದುಗಳ ಸಂಪ್ರದಾಯ. ಹಾಗೆ, ಮಡೆಸ್ನಾನ ದಕ್ಷಿಣ ಕನ್ನಡದ ನಂಬಿಕೆ. ಅದನ್ನು ವಿರೋಧಿಸುವುದಾದರೆ, ಕುರಿ, ಕೋಳಿ ಬಲಿಯನ್ನೂ ನಿಲ್ಲಿಸಿ. ಇದು, ಮಡೆಸ್ನಾನಕ್ಕಿಂತ ಹೇಯಕೃತ್ಯವಲ್ಲವೇ? ಗೋಮಾಂಸ ತಿನ್ನುವುದು ಅವರ ಆಹಾರ ಪದ್ದತಿ. ಹಾಗಾಗಿ ಅದು ಸಮರ್ಥನೀಯ ಅಂತಾದರೆ, ಮಡೆಸ್ನಾನವೂ ಅವರ ನಂಬಿಕೆ. ಅದಕ್ಕೆ ನೀವೇಕೆ ಪುಗ್ಸಟ್ಟೆ ಕಲ್ಲು ಎಸೆಯುತ್ತೀರಿ?

ಯಾವತ್ತೂ ಹಾಗೆ, ಹುಚ್ಚಾಸ್ಪತ್ರೆಯ ಒಳಗೆ ಕುಳಿತವನಿಗೆ ಹೊರಗಿನವರು ಹುಚ್ಚರು. ಹೊರಗೆ ಕುಳಿತವನಿಗೆ ಒಳಗಿನವ. ನಮ್ಮ ಬುದ್ಧಜೀವಿಗಳ ಕಥೆಯೂ ಹಾಗೆ. ಇಲ್ಲಿ ಕುಳಿತ ಮಂದಿಗೆ ಕುಕ್ಕೆ ಸುಬ್ರಮಣ್ಯದಲ್ಲಿ ಉರುಳುವವರೆಲ್ಲ ಅನಕ್ಷರಸ್ಥರು. ಅವಿದ್ಯಾವಂತರು. ಅವರ ಅಂಕಪಟ್ಟಿಯನ್ನೆಲ್ಲ ತರಿಸಿ ಪರಿಶೀಲನೆ ನಡೆಸಿದ್ದಾರೆ ನೋಡಿ ಇವರುಗಳು!
ಅಂದಹಾಗೆ ಈ ಪದ್ದತಿ ಜೆಡಿಎಸ್, ಕಾಂಗ್ರೆಸ್ ಪಕ್ಷವಿದ್ದ ಕಾಲದಲ್ಲೂ ಇತ್ತು. ಆಗ ಯಾರೂ ಗಲಾಟೆ ಮಾಡಲಿಲ್ಲ. ಈಗ ಇದ್ದಕ್ಕಿಂದ್ದಂತೆ ಕೆಲವರಿಗೆ ಮಾನವೀಯತೆ ಉಕ್ಕಿದ್ದೇಕೆ? ಅಸಹ್ಯ ಅಂತಾ ಕೆಲವರು ಬೀದಿಗಿಳಿದಿದ್ದು ಯಾಕೆ? ಆವತ್ತು ಅದು ಸಹ್ಯವಾಗಿತ್ತಾ ಇವರುಗಳ ಪಾಲಿಗೆ ಎಂದರೆ, ಮತ್ತದೆ ಬ್ರಾಹ್ಮಣ, ದಲಿತ ಅಂತಾ ಮೂಗು ತುರಿಸುತ್ತಾರೆ. ಮೇಲ್ಜಾತಿ-ಕೆಳಜಾತಿ ಅಂತಾ ಕೆರೆದುಕೊಳ್ಳುತ್ತಾರೆ!

ಒಬ್ಬರೊ, ಇಬ್ಬರೋ ಸೇವೆ ಮಾಡಿದ್ದರೆ ಒಪ್ಪಬಹುದಾದ ಮಾತು. ಇವರು ಹೇಳಿದ ಹಾಗೆ ಮೇಲ್ಜಾತಿಯ ಹುನ್ನಾರ ಅನ್ನಬಹುದಿತ್ತು. ಆದರೆ ಸಾವಿರಾರು ಮಂದಿ ಈ ಸೇವೆ ಮಾಡಿದ್ದಾರೆ. ಅವರ‍್ಯಾರಿಗೂ ಈ ಸೇವೆ ಯಾಕೆ ಅಸಹ್ಯ ಅನ್ನಿಸಲಿಲ್ಲ. ಈ ಎಲ್ಲ ಸಾವಿರಾರು ಮಂದಿಯೂ ಅನಕ್ಷರಸ್ಥರಾ? ಅವಿದ್ಯಾವಂತರ? ಕಳೆದ ವರ್ಷ ನ್ಯಾಯಾಧೀಶರೊಬ್ಬರು ಮಡೆಸ್ನಾನ ಮಾಡಿದ್ದಾಗಿ ಹೇಳಿಕೊಂಡಿದ್ದರು. ಅವರು ಬಹುಶಃ ಅನಕ್ಷರಸ್ಥರಿರಬೇಕು. ಅಥವಾ ಮೇಲ್ಜಾತಿಯ ಪಿತೂರಿಯಿಂದ ಅವರು ಹಾಗೆ ಮಾಡಿರಬೇಕು!

ಬೆಂಗಳೂರಿನಲ್ಲಿ ಕುಳಿತು ಸುಮ್ಮನೆ ಮೈಉಜ್ಜಿಕೊಂಡರೆ ಯಾವ ಬದಲಾವಣೆಯೂ ಆಗುವುದಿಲ್ಲ. ಕೆಲವರಿಗೆ ಮೈಉಜ್ಜಿಕೊಂಡ ಆಧಾರದಲ್ಲಿ ಒಂದಿಷ್ಟು ಪ್ರಶಸ್ತಿಗಳು ಬರುತ್ತವೆ ಎಂಬುದನ್ನು ಹೊರತುಪಡಿಸಿ(ಅದು ಬರುವುದಿಲ್ಲ, ಕೊಡಿಸುವ ಏಜೆಂಟರಿಗೆ ಕಮಿಷನ್ ನೀಡಿ ಪಡೆಯವುದು!)ಹರಕೆ ಹೊತ್ತುಕೊಂಡವರು, ಯಾರು ನಿಷೇಧ ಹೇರಿದರೂ ಆ ಸೇವೆ ಸಲ್ಲಿಸುತ್ತಾರೆ. ಹರಕೆ ತೀರಿಸದಿದ್ದರೆ ಕೆಡುಕಾಗುತ್ತದೆ ಎಂಬ ಆಂತರಿಕ ಭಯ ಅವರಲ್ಲಿರುತ್ತದೆ. ಜೊತೆಗೆ ಹರಕೆ ಕಟ್ಟಿಕೊಂಡ ನಂತರ ಒಳ್ಳೆಯದಾಗಿದೆ ಎಂಬ ನಂಬಿಕೆ ಇರುತ್ತದೆ. ಹಾಗಾಗಿ ಇಲ್ಲಿ ಜಾತಿ ಹೆಸರಲ್ಲಿ ಮೈಪರಚಿಕೊಳ್ಳುವುದರಲ್ಲಿ ಅರ್ಥವಿಲ್ಲ…

ಕೆಲವರಿಗೆ ಸಿಗರೇಟು, ಹೆಂಡ ಮಾನಸಿಕ ನೆಮ್ಮದಿ ನೀಡುವ ಸಾಧನಗಳು. ಕುಳಿತು ಕುಡಿಯುವ ಬಾರು ಮುಖ್ಯವಾಗುವುದಿಲ್ಲ. ಅದು ಮಾರುಕಟ್ಟೆಯ ಬಾರು ಆಗಿರಬಹುದು, ಪಂಚತಾರಾ ಹೊಟೇಲಿನ ಬಾರು ಅಗಿರಬಹುದು. ಅವರ ಶಕ್ತಿಗೆ ಅನುಗುಣವಾದ, ಅಗತ್ಯಕ್ಕೆ ತಕ್ಕ ಜಾಗದಲ್ಲಿ ಕುಡಿಯುತ್ತಾರೆ. ಮಾನಸಿಕ ನೆಮ್ಮದಿ ಪಡೆಯುತ್ತಾರೆ. ಹಾಗೆಯೇ ದೇವರು, ಸೇವೆಗಳು ಕೂಡ. ಇದಕ್ಕೆ ಮತ್ತೆ ಜಾತಿ ಲೇಪ ಕಟ್ಟಿ ವಿರೋಧಿಸುವುದರಲ್ಲಿ ಅರ್ಥವಿಲ್ಲ. ಒಬ್ಬರ ನಂಬಿಕೆಯನ್ನು ಬಲವಂತವಾಗಿ ಕಸಿದುಕೊಳ್ಳುವುದು ಥರವಲ್ಲ…

(ವಿಂಡೋಸ್‌ ೭ ಹಾಕಿಕೊಂಡು ಕನ್ನಡ ಕುಟ್ಟಲು ಕಷ್ಟಪವುತ್ತಿದ್ದೇನೆ. ಅಕ್ಷರದೋಷಗಳಿರಬಹುದು. ಕ್ಷಮೆ ಇರಲಿ…)

ಬರೆಯದೆ ಸಿಕ್ಕಾಪಟ್ಟೆ ದಿನಗಳಾಗಿದೆ. ಮುದ್ರಣ ಮಾಧ್ಯಮದಿಂದ ದೃಶ್ಯ ಮಾಧ್ಯಮಕ್ಕೆ ಜಿಗಿದಿರುವುದಕ್ಕೆ ಇದು ಮೊದಲ ಸಾಕ್ಷಿಯಾ ಅಂತಾ ಮಾತ್ರ ಕೇಳಬೇಡಿ! ಹಲವಾರು ದಿನಗಳಿಂದ ಏನು ಬರೆಯದ ನಿಧಿ, ಸುಶ್ರುತ, ವಿಕಾಸ್‌ರಂಥ ಒಂದಷ್ಟು ಬ್ಲಾಗ್ ಗೆಳೆಯರು ನನಗೆ ಸಾಥ್ ನೀಡುತ್ತಿದ್ದಾರೆ! ಹಾಗಾಗಿ ಇದು ದೃಶ್ಯ ಮಾಧ್ಯಮದ ಅಡ್ಡ-ಉದ್ದ ಪರಿಣಾಮವಲ್ಲ. ಅದ್ಯಾಕೊ ಬರೆಯಲು ಮನಸ್ಸಾಗುತ್ತಿಲ್ಲ. ಬರೆಯಲು ಮನಸ್ಸಾಗುತ್ತಿಲ್ಲ ಅನ್ನೋ ವಿಷಯವನ್ನೇ ಇಟ್ಟುಕೊಂಡು ಮತ್ತೆ ಬರೆಯಲು ಶುರುವಿಟ್ಟಿದ್ದೇನೆ!

ಬೆಂಗಳೂರು ಬೋರಾಗುತ್ತಿದೆ ಎಂಬ ರಾಗವನ್ನು ಮತ್ತೆ ಎಳೆಯುವಂತಿಲ್ಲ. ಮತ್ತ್ಯಾಕೆ ಇನ್ನೂ ಇಲ್ಲೇ ಇದ್ದೀರಾ ಅನ್ನೋ ಪ್ರಶ್ನೆಗೆ ಉತ್ತರವಿಲ್ಲ. ಉತ್ತರವಿದ್ದರೂ, ಅದನ್ನು ಹುಡುಕಾಡುವ ಸ್ಥಿತಿಯಿಲ್ಲ. ಇನ್ನೂ, ಕೆಲಸ ಬೇಜಾರು ಬಂದಿದೆ ಅಂತೇನಾದ್ರು ತಗಾದೆ ತೆಗೆದ್ರೆ, ನಾನೇ ಸರಿಯಿಲ್ಲ ಎಂಬ ತೀರ್ಮಾವನ್ನು ಸಮಾಜ ತೆಗೆದುಕೊಂಡು ಬಿಡುತ್ತದೆ. ಹೀಗಾಗಿ ಆ ವಿಚಾರದಲ್ಲಿ ಚೂರು ಕೆಮ್ಮುವಂತಿಲ್ಲ. ಇವೆರಡನ್ನು ಬಿಟ್ಟು ಸರಿಯಿಲ್ಲ ಅಂತಾ ಆರೋಪಿಸಲು ಮತ್ತ್ಯಾವ ವಿಚಾರವೂ ಸಿಗುತ್ತಿಲ್ಲ. ಒಟ್ನಲ್ಲಿ ಕನ್ನಡ ರಾಜ್ಯೋಸ್ತ(ತ್ಸ)ವದ ಶುಭ ಸಂದರ್ಭದಲ್ಲಿ ಬದುಕು ಟೋಟ್ಟಲಿ ಅಯೊಮಯ!

ಹೌದು, ಬದುಕು ಒಂದು ರೀತಿ ಸಂಕೀರ್ಣ ಅನ್ನಿಸುತ್ತಿದೆ ಅಥವಾ ನಾವು ಬದುಕುವ ರೀತಿಯೆ ಸಂಕೀರ್ಣಗೊಂಡಿದೆ. ನಮ್ಮೂರಲ್ಲಿ ಮಳೆಗಾಲ ಬಂತು ಅಂದ್ರೆ ೬ ತಿಂಗಳು ವಾಹನ ಸಂಚಾರವಿಲ್ಲ. ಜೀವ ಹೋಗುತ್ತೆ ಅಂದ್ರೆ ಹತ್ತಿರದಲ್ಲಿ ಆಸ್ಪತ್ರೆಯಿಲ್ಲ. ಅಡುಗೆ ಮಾಡಲು ಬೇಜಾರು ಅಂತಾ ಹೊಟೆಲ್‌ಗೆ ಹೋಗಲು ಸಾಧ್ಯವಿಲ್ಲ. ಇನ್ನೂ, ಇರೋ ಮೂರು ಮತ್ತೊಂದು ಗೇಣು ಜಾಗಕ್ಕೆ ನೂರೆಂಟು ಮಂದಿಯ ರಗಳೆ…ಹೀಗೆಲ್ಲ ಆಲೋಚಿಸಿ ನಾವೆಲ್ಲ ನಗರಗಳತ್ತ ಮುಖ ಮಾಡಿದ್ದು. ಅಂದುಕೊಂಡ ಹಾಗೆ ನಗರ ಎಂಬುದು ನಮ್ಮ ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಒದಗಿಸಿರುವುದು ಸುಳ್ಳಲ್ಲ. ಆದ್ರೆ ಈ ನಗರದಲ್ಲೂ ಅದರದ್ದೆ ಆದ ಒಂದಷ್ಟು ಸಮಸ್ಯೆಗಳಿವೆ. ಇವೆಲ್ಲ ಅರಿವಾಗುವುದು ಮನೆಗೆ ನೆಂಟರು ಬಂದಾಗ ನೀರು ಬರದೇ ಇದ್ದಾಗ, ಆಫೀಸಿಗೆ ತಡವಾಗಿ ಹೊರಟಾಗ ಟ್ರಾಫಿಕ್ ಜಾಮ್ ಆದಾಗ!

ನಿನ್ನೆ ನಾವು ಗೆಳೆಯರೊಂದಷ್ಟು ಜನ ಪಟಾಕಿ ಹೊಡೆಯುವ ಕುರಿತು ಮಾತನಾಡುತ್ತಿದ್ದೆವು. ನನಗೆ ಈ ಬೆಂಗಳೂರಿನ ಕುರಿತು ಅತಿಯಾಗಿ ಸಿಟ್ಟು ಬಂದಿದ್ದು ಈ ಸಲದ ದೀಪಾವಳಿಯಲ್ಲಿ ಇಲ್ಲಿನ ಪಟಾಕಿ ಹಾವಳಿ ನೋಡಿದಾಗ. ಯಾರದ್ದೊ ಮನೆಯಲ್ಲಿ ಹಚ್ಚಿದ ರಾಕೆಟ್ಟು ಇನ್ನ್ಯಾರದ್ದೊ ಮನೆ ಬಾಗಿಲಿಗೆ ಹೋಗಿ ಬೀಳುತ್ತದೆ. ಇದರ ಅರಿವು ಇರುವ ಬಿಇ, ಎಬಿಎಂ…ವಗೈರೆ,ವಗೈರೆ ಪದವೀಧರರುಗಳು ಪಟಾಕಿ ಹೊಡೆಯವುದು ಮಾತ್ರ ಬಿಡುವುದಿಲ್ಲ. ನಡು ರಸ್ತೆಯಲ್ಲಿ ನೂರಾರು ವಾಹನಗಳು ಓಡಾಡುತ್ತವೆ. ಅವರೆಲ್ಲರಿಗೂ ತೊಂದರೆ ಕೊಟ್ಟು, ಎಲ್ಲರನ್ನೂ ತಡೆದು ನಿಲ್ಲಿಸಿಯಾದರೂ ಪಟಾಕಿ ಸರ ಹಚ್ಚಿ ವಿಕೃತ ಸಂತೋಷ ಅನುಭವಿಸುವುದು ನಗರ ಜೀವನಕ್ಕೆ ಸಾಕ್ಷಿ ಇರಬಹುದೆ?

ಊರಲ್ಲಿನ ಪಟಾಕಿ ಗಮ್ಮತ್ತು ಬೇರೆ. ರಾಕೆಟ್‌ನಲ್ಲಿ ಥರ-ಥರದ ಪ್ರಯೋಗಳು. ಬಾಟಲಿಯಲ್ಲಿ ರಾಕೆಟ್ ಇಡುವುದು, ತೆಂಗಿನಕಾಯಿ ಗರಟೆಯಲ್ಲಿ ರಾಕೆಟ್ ಇಡುವುದು, ಸುರುಸುರು ಕಡ್ಡಿಯನ್ನು ತಿರುಗಿಸಿ-ತಿರುಗಿಸಿ ಎಸೆಯುವುದು, ಬೇಲಿಯ ಗೂಟಕ್ಕೆ ಸರ ಪಟಾಕಿ ಹಚ್ಚುವುದು, ನೆಲಚಕ್ರವನ್ನು ಉರುಳಿಸಿ ಬಿಡುವುದು. ವಾಲೆಗರಿಯನ್ನು ಕೈಯಲ್ಲಿ ಹಿಡಿದು ಹೊಡೆಯುವುದು…ಪಟಾಕಿಯೊಂದಿಗೆ ಮಾಡಿದ ಪ್ರಯೋಗಗಳಿಗೆ ಲೆಕ್ಕವಿಲ್ಲ. ಅಂಥದ್ದೆ ಪ್ರಯೋಗಗಳು ಇಲ್ಲಿ ನಡೆದರೆ ಸಿಟ್ಟು ಬರುತ್ತದೆ. ಕಾರಣವಿಷ್ಟೆ ಊರಲ್ಲಿ ಒಬ್ಬ ಮಲಗುವಷ್ಟು ಜಾಗ, ಇಲ್ಲಿ ೩ ಕುಟುಂಬಗಳಿಗೆ ಆಸರೆ. ಇದು ನಗರದ ಮತ್ತೊಂದು ಮುಖ.

ಇನ್ನೂ ಕಚೇರಿಗಳಲ್ಲಂತೂ ಮನುಷ್ಯತ್ವ ಅನ್ನುವುದು ಕಳೆದುಹೋಗುತ್ತಿದೆ. ಪಕ್ಷ ರಾಜಕೀಯವಿದ್ದಂತೆ, ಆಫೀಸ್‌ಗಳಲ್ಲಿ ಬಣ ರಾಜಕೀಯ. ಬಹುಶಃ ಇದು ಪತ್ರಿಕೋದ್ಯಮದಿಂದ-ಸಾಫ್ಟ್‌ವೇರ್‌ವರೆಗೆ ಯಾವುದೇ ಕ್ಷೇತ್ರವನ್ನು ಬಿಟ್ಟಂತಿಲ್ಲ. ಯಾರಾದರು ಒಬ್ಬರನ್ನು ಇಷ್ಟಪಟ್ಟು ಮಾತನಾಡಿಸಿದರೆ ಮತ್ತೊಬ್ಬರಿಗೆ ಬೇಸರ. ಯಾರ ಜೊತೆಗಾದರು ಹೆಚ್ಚು ಸ್ನೇಹ ಬೆಳೆಸಿದರೆ, ಅದಕ್ಕೆ ಸಂಬಂಧಗಳ ತಳುಕು. ದಿನ ಕಳೆದಂತೆ ಅದೊಂದು ವಿಕೃತ ಸಂತೋಷದ ವಸ್ತುವಾಗಿಬಿಡುತ್ತದೆ. ನಮಗೆ, ಯಾರೊಂದಿಗಾದರೂ ಸಂಬಂಧ ಕಲ್ಪಿಸಿ ಮಾತನಾಡಿದರೆ, ನಮ್ಮ ಪಾಲಿಗದು ಮಜ ತೆಗೆದುಕೊಳ್ಳುವ ವಿಷಯವಾಗಿಬಿಡುತ್ತದೆ.

ಯಾರು ಎಷ್ಟು ದಿನ ಬದುಕುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಆದಾಗ್ಯೂ ಬದುಕಿದಷ್ಟು ದಿನ ಬದ್ಧ ವೈರಿಗಳಂತೆ ಆಡುವುದನ್ನು ಬಿಡುವುದಿಲ್ಲ. ಏನೊ ದೊಡ್ಡ ವಿಚಾರಕ್ಕೆ ಇವರುಗಳ ಮುನಿಸಿರಬಹುದೇ ಎಂದರೆ, ಊಹುಂ ಖಂಡಿತ ಇಲ್ಲ. ಆಫೀಸಿನಲ್ಲಿ ನಾನು ಹೇಳಿದ ಕಂಪನಿಯ ನೀರು ಬಾಟಲಿ ತರಿಸಲಿಲ್ಲ, ನಾನು ಹೇಳಿದ ವಿನ್ಯಾಸದ ಪೊರಕೆ(ಹಿಡಿಸುಡಿ) ತಂದಿಲ್ಲ. ಬದಲಾಗಿ ಅವರ ಗುಂಪಿನ ಮಾತು ಮೇಲಾಗಿದೆ ಎಂಬ ವಿಷಯಕ್ಕೆ ಕಿತ್ತಾಟ! ಅವನು ನನಗಿಂತ ಮೊದಲು ಇವನ್ನನ್ನು ಮಾತನಾಡಿಸಿದ ಎಂಬ ಕಾರಣಕ್ಕೆ ಹಗೆ. ಇದರಿಂದ ಲಾಭವೇನು ಎಂದರೆ ಯಾರಲ್ಲೂ ಉತ್ತರವಿಲ್ಲ. ಹಿಂದೆಲ್ಲ ರಾಜರ ಗೋರಿ ಮೇಲೆ ಶ್ರೀಯುತರು ಕ್ರಿ.ಶ ಇಷ್ಟರಿಂದ-ಇಷ್ಟವರೆಗೆ…ಸಾಮ್ರಾಜ್ಯವನ್ನು ಆಳಿದರು ಎಂದು ಇರುತ್ತಿತ್ತಂತೆ. ಮುಂದೆ ಕೆಲವರ ಗೋರಿಗೆ ಹಾಗೆ ಕೆತ್ತಿಸಬೇಕು. ಶ್ರೀಯುತರು ಈ ಬಣವನ್ನು ಇಷ್ಟರಿಂದ-ಇಷ್ಟರವರೆಗೆ…ಆಗಲಾದರೂ ಅವರ ಹಗೆತನಕ್ಕೆ ಅರ್ಥ ಬರಬಹುದು!

ತಂತ್ರಜ್ಞಾನ ವೃದ್ಧಿ ಎಂಬುದು ಈ ಬಣ ಕಾಳಗಕ್ಕೆ ತುಪ್ಪ ಸುರಿಯುತ್ತಿವೆ. ಇಬ್ಬರ ನಡುವೆ ಜಗಳ ತಂದಿಡಲು ವೇದಿಕೆಯಾಗುತ್ತಿವೆ. ಪತ್ರಿಕೋದ್ಯಮದ ಕುರಿತು ಪುಂಖಾನುಪುಂಖವಾಗಿ ಉಪದೇಶದ ಶಂಖ ಊದುವ ಒಂದಷ್ಟು ಬ್ಲಾಗ್‌ಗಳು ಬಣ ರಾಜಕೀಯದಲ್ಲಿ ಮುಳುಗಿ ಹೋಗಿವೆ. ಒಂದು ಗುಂಪಿನವರು ಮಾಡುವ ಹಾದರ ಅಲ್ಲಿ ಸುದ್ದಿಯಾಗುವುದಿಲ್ಲ. ಜೊತೆಗೆ ಬೇನಾಮಿ ಪ್ರತಿಕ್ರಿಯೆಗಳು. ಆಫೀಸಿನಲ್ಲಿ ಹಗೆತನವಿರುವವರ ಹೆಸರಿನಲ್ಲಿ ಕಮ್ಮೆಂಟ್ ದಾಖಲಿಸುವುದು. ವಾಸ್ತವವಾಗಿ ಅದರ ಅರಿವು ಆ ವ್ಯಕ್ತಿಗೆ ಇರುವುದೇ ಇಲ್ಲ. ಯಾರದ್ದೊ ಮೇಲ್ ಐಡಿ ನಕಲು ಮಾಡಿ ಜಗಳ ಹಚ್ಚಿಹಾಕುವುದು ಇತ್ತೀಚಿನ ದಿನಗಳಲ್ಲಿ ವಿಪರೀತವಾಗುತ್ತಿದೆ.

ಯಾವುದಾದರು ಅಷ್ಟೆ, ನಾವು ಸಮಸ್ಯೆ ಅಂದುಕೊಂಡರೆ ಮಾತ್ರ ಅದು ಸಮಸ್ಯೆಯಾಗುತ್ತದೆ. ಅದು ಸಮಸ್ಯೆಯೇ ಅಲ್ಲ, ಅವರು ಮಾತನಾಡಿದ್ದು ನಮಗೆ ಕೇಳಿಸಲೇ ಇಲ್ಲ ಅಂದುಕೊಂಡರೆ, ಅದು ಸಮಸ್ಯೆಯಾಗುವುದಿಲ್ಲ. ನಾವು ಕೂಡ ಅದೇ ಸಿದ್ಧಾಂತ ಅಳವಡಿಸಿಕೊಂಡರೆ ಮಾತ್ರ ಬದುಕಲು ಸಾಧ್ಯ. ಇಲ್ಲವಾದರೆ ಯಾರದ್ದೊ ಸಮಸ್ಯೆಗೆ ನಾವು ಅನಾಸಿನ್ ತಿನ್ನಬೇಕಾದ ದೃಶ್ಯ ಎಂಬಲ್ಲಿಗೆ ಇವತ್ತಿನ ಪ್ರಸಂಗ ಪೂರ್ಣಗೊಳ್ಳುತ್ತದೆ!

ಬದುಕು ನಿಂತ ನೀರಾಗಬಾರದು. ಹರಿಯುವ ನದಿಯಾಗಬೇಕು ಅಂತಾರೆ ಬಲ್ಲವರು. ೪-೫ ವರ್ಷ ಒಂದೇ ರೀತಿಯ ಕೆಲಸ ಮಾಡುತ್ತಿದ್ದರೆ, ಸ್ವಾಭಾವಿಕವಾಗಿ ಅದು ನಮಗೆ ಬೇಸರ ತರಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಒಂದೇ ಕಡೆ ಅಂಟಿಕೊಂಡರೆ ಬದುಕಿನ ಒಂದಷ್ಟು ಅನುಭವಗಳನ್ನು ಕಳೆದುಕೊಳ್ಳುತ್ತೇವೆ. ಹೀಗೆಲ್ಲ ಯೋಚಿಸಿ ಕೆಲಸದಲ್ಲೊಂದು ಪುಟ್ಟ ಬದಲಾವಣೆ ಮಾಡಿಕೊಂಡಿದ್ದೇನೆ. ಸುಮಾರು ೪ ವರ್ಷಗಳಿಂದ ಕೈಹಿಡಿದು ನಡೆಸಿದ್ದ ಮುದ್ರಣ ಮಾಧ್ಯಮದಿಂದ, ದೃಶ್ಯ ಮಾಧ್ಯಮದತ್ತ ಹೆಜ್ಜೆ ಹಾಕಿದ್ದೇನೆ. ಅದಕ್ಕೂ, ಇದಕ್ಕೂ ಏನು ವ್ಯತ್ಯಾಸ ಅಂತಾ ಬಹಳಷ್ಟು ಮಂದಿಕೇಳಿದ್ದಾರೆ. ಅಲ್ಲ, ಅಂಥ ಒಳ್ಳೆ ಪತ್ರಿಕೆ ಬಿಟ್ಟು ಇಲ್ಲಿಗ್ಯಾಕೆ ಬಂದ್ರಿ ಅನ್ನುವ ದಾಟಿಯಲ್ಲಿ ಮಾತಾಡಿದವರೂ ಇದ್ದಾರೆ.

ಕೆಟ್ಟ ಬಾಸಿನ ಕಾಟ ತಾಳಲಾರದೆ ಬಿಟ್ಟಿದ್ದೇನೆ ಅಂದವರಿಗೂ ಕೊರತೆಯಿಲ್ಲ! ಇಲ್ಲಿ ಒಂದು ಸ್ಪಷ್ಟೀಕರಣ ಕೊಡಬೇಕಿದೆ. ಕೆಟ್ಟ ಬಾಸಿನ ಕಾಟ ಅಂದವರು ಹೆಸರಿಸಿರುವ ವ್ಯಕ್ತಿ, ನನಗೆ ಯಾವತ್ತೂ ಬಾಸ್ ಆಗಿರಲಿಲ್ಲ. ಬಾಸಿಸಂ ಸಂಸ್ಕೃತಿ ಒಪ್ಪಿಕೊಂಡು ಕೆಲಸ ಮಾಡಬೇಕಾದ ಯಾವ ಅನಿವಾರ್ಯತೆಯೂ ನನಗಂತೂ ಇಲ್ಲ. ಜಗತ್ತು ಸಾಕಷ್ಟು ವಿಶಾಲವಾಗಿದೆ ಅಂತಾ ನಂಬಿದವನು. ಅವರ ಜೊತೆಗೆ ನನ್ನ ನಂಟು ಇವತ್ತಿಗೂ ಚೆನ್ನಾಗಿದೆ. ಬೇರೆಯವರ ಪಾಲಿಗೆ ಅವರು ಹೇಗೋ ಗೊತ್ತಿಲ್ಲ.

ಕೆಲಸ ಬದಲಿಸಿದ್ದರಿಂದ ಒಂದಷ್ಟು ಲಾಭವಾಗಿದೆ. ಒಂದಷ್ಟು ನಷ್ಟವಾಗಿದೆ. ಮುಖ್ಯವಾಗಿ ನನ್ನ ನಿತ್ಯದ ೧೪ ತಾಸಿನ ನಿದ್ದೆಗೆ ಕಡಿವಾಣ ಬಿದ್ದಿದೆ. ವಿಶ್ರಾಂತಿಯ ಸಮಯ ೧೨ ತಾಸಿಗೆ ಇಳಿಕೆಯಾಗಿದೆ! ಇದೆಲ್ಲ ಪುರಾಣ ಸುಮ್ನೆ ಡೈರಿಯಲ್ಲಿ ಗೀಚಿಕೊಳ್ಳಿ, ಇಲ್ಲಿ ಯಾಕೆ ಹೇಳುವಿರಿ ಅನ್ನಬಹುದು ನೀವು! ದೃಶ್ಯ ಮಾಧ್ಯಮ ಹೇಗಿರಬಹುದು ಎಂಬ ಪರಿಕಲ್ಪನೆ ನಮ್ಮಲ್ಲಿ ಸಾಕಷ್ಟು ಜನರಿಗೆ ಇಲ್ಲ. ಅಲ್ಲಿ ಕಾಲಿಡುವವರೆಗೂ ನನಗೂ ಇರಲಿಲ್ಲ. ಹಾಗಾಗಿ ಒಂದಷ್ಟು ಬರಯಬೇಕು ಅನ್ನಿಸಿದೆ.

೨೪*೭ ಎಂಬುದೇ ಒಂದು ರೀತಿಯ ಧಾವಂತದ ಬದುಕು. ಏನನ್ನಾದರೂ ಬ್ರೇಕ್ ಮಾಡುತ್ತ ಇರಬೇಕು. ಏನು ಸಿಗದಿದ್ದರೆ ಕೊನೆಗೆ ಯಾರ ಸಂಸಾರವನ್ನಾದರೂ ಬ್ರೇಕ್ ಮಾಡಬೇಕು! ಮುದ್ರಣ ಮಾಧ್ಯಮದ ರೀತಿಯಲ್ಲಿನ ಪುರುಸೊತ್ತು ಎಂಬ ಪದ ಇಲ್ಲಿಲ್ಲ. ಹಾಗಂತ ಕಚೇರಿಯ ವೇಳೆಯಲ್ಲಿ ಒತ್ಲಾ ಹೊಡೆಯುವವರಿಗೂ ಈ ಜಗತ್ತಿನಲ್ಲಿ ಕೊರತೆಯಿಲ್ಲ ಅನ್ನೋದು ನಂತರದ ಮಾತು ಬಿಡಿ!

ಪೇಪರ್‌ಗಳು ಈ ಸ್ಪರ್ಧೆಗೆ ಯಾವತ್ತೂ ತಲೆಕೆಡಿಸಿಕೊಂಡಿಲ್ಲ. ಮುಖ್ಯವಾದ ಸುದ್ದಿಗಳು ಯಾವತ್ತೂ ತಪ್ಪಿ ಹೋಗೋದಿಲ್ಲ. ಒಂದು ಪತ್ರಿಕೆಯಲ್ಲಿ, ಇನ್ನೊಂದು ಪತ್ರಿಕೆಯಿಂದ ಮಿಸ್ ಆದ ಸುದ್ದಿಗಳ ಪಟ್ಟಿ ಮಾಡಿ, ಮಿಸ್ ಮಾಡಿದವನು ಮುಖ್ಯಸ್ಥರಿಗೆ ಬೇಡದ ವ್ಯಕ್ತಿಯಾಗಿದ್ದರೆ, ಅವನಿಗೊಂದಷ್ಟು ಉಗಿದು ಕೈತೊಳೆದುಕೊಳ್ಳುವುದು ಮುದ್ರಣ ಮಾಧ್ಯಮದ ಸಂಸ್ಕೃತಿ.

ಆದ್ರೆ ಇಲ್ಲಿ ಹಾಗಾಗುವುದಿಲ್ಲ. ಮತ್ತೊಂದು ವಾಹಿನಿಯಲ್ಲಿ ಬರುತ್ತಿರುವುದನ್ನು ಕದ್ದಾದರೂ ಬ್ರೇಕಿಂಗ್ ಅಂತಾ ಪ್ರಕಟಿಸುತ್ತೇವೆ. ಕನ್ನಡದ ಎಲ್ಲಾ ಸುದ್ದಿ ವಾಹಿನಿಗಳು ಹೆಚ್ಚಾಗಿ ರಾಷ್ಟ್ರೀಯ ವಾಹಿನಿಗಳಿಂದ ಯಥಾವತ್ತಾಗಿ ಕದಿಯಲ್ಪಡುತ್ತವೆ. ಈ ಪದ ಉಪಯೋಗಿಸಲು ಖಂಡಿತ ಕಾರಣವಿದೆ. ಅಲ್ಲಿ ಬರುತ್ತಿರುವ ಸುದ್ದಿಯನ್ನು ತೆಗೆದುಕೊಂಡರೆ, ಅದು ಕಳ್ಳತನವಾಗುವುದಿಲ್ಲ. ಆದ್ರೆ ದೃಶ್ಯಗಳನ್ನೂ ಭಟ್ಟಿ ಇಳಿಸಿದಾಗ, ಅದನ್ನು ಕಳ್ಳತನ ಅನ್ನದೆ ಬೇರೆ ಪದ ಬಳಸುವುದು ಸೂಕ್ತವಲ್ಲ! ಎಷ್ಟೋ ಸಲ ಕೃಪೆ ಅನ್ನುವ ಪದ ಕೂಡ ಬಾರದಿರುವುದು ಇದಕ್ಕೆ ಮುಖ್ಯ ಕಾರಣ.

ಇನ್ನು ತಪ್ಪು ಸುದ್ದಿ, ಅಜರುದ್ದೀನ್ ಮಗ ಸತ್ತೇ ಹೋದ ಅಂತಾ ಕೆಲವಷ್ಟು ವಾಹಿನಿಗಳು ಬಿತ್ತರಿಸಿದವು. ವಾಸ್ತವವಾಗಿ ಬೈಕ್‌ನಲ್ಲಿ ಅವನ ಹಿಂದೆ ಕುಳಿತವ ಸತ್ತಿದ್ದ. ಯಾರೋ ಟ್ರಾನ್ಸ್‌ಲೇಷನ್ ಬಾರದ ಕಾಪಿ ಎಡಿಟರ್ ಒಬ್ಬ, ಆಂಗ್ಲವಾಹಿನಿ ನೋಡಿ ಅಜರುದ್ದಿನ್ ಮಗನೇ ಸತ್ತ ಎಂದು ಮಾಡಿರುತ್ತಾನೆ! ಸುದ್ದಿ ನೋಡಲು ಪುರುಸೊತ್ತು ಇಲ್ಲದ ಸುದ್ದಿ ವಿಭಾಗದ ಮುಖ್ಯಸ್ಥ ಅದನ್ನೇ ಕಳುಹಿಸಿರುತ್ತಾನೆ. ಇಂಥ ೫೦-೧೦೦ ತಪ್ಪುಗಳು ಪ್ರತಿನಿತ್ಯ ಎಲ್ಲಾ ವಾಹಿನಿಗಳಲ್ಲೂ ಸಿಗುತ್ತವೆ! ಇಲ್ಲಿ ಸುದ್ದಿಯನ್ನು ಖಾತ್ರಿಪಡಿಸಿಕೊಳ್ಳುವಷ್ಟು ಸಮಯವಿಲ್ಲ. ನಾವು ಬರೆದ ಸುದ್ದಿಯನ್ನು ಮತ್ತೊಮ್ಮೆ ನಾವೇ ಓದುವಷ್ಟು ವ್ಯವಧಾನ ಯಾರಿಗೂ ಇಲ್ಲ. ಹಾಗಾಗಿ ತಪ್ಪುಗಳು ಸಹಜ. ಅಕ್ಷರ ದೋಷಗಳು ಮಾಮೂಲು.

ಇನ್ನೂ, ಕನ್ನಡ ವಾಹಿನಿಗಳಲ್ಲಿ ಕನ್ನಡಕ್ಕಿಂತ ಇಂಗ್ಲಿಷ್‌ನದ್ದೇ ಅಬ್ಬರ ಹೆಚ್ಚು! ಸಾಮಾನ್ಯ ಕನ್ನಡ ಪದಗಳನ್ನೂ ಇಂಗ್ಲಿಷ್‌ನಲ್ಲೇ ಹೇಳುತ್ತಾರೆ. ಬಹುಶಃ ಈ ಕಾಲದ ಜನಕ್ಕೆ ಇಂಗ್ಲಿಷ್ ಅರ್ಥವಾಗುತ್ತೆ ಅನ್ನೋ ಕಾರಣವಿರಬಹುದು!

ಅದಕ್ಕಿಂತ ಮಜ ನಿರೂಪಕರದ್ದು. ತೆರೆಯ ಮೇಲೆ ಬರುವ ನಿರೂಪಕರು ವೀಕ್ಷಕರ ಪಾಲಿಗೆ ಹೀರೋಗಳು, ಬುದ್ಧಿವಂತರು! ವಾಸ್ತವವಾಗಿ ಅಲ್ಲಿ ಅವರ ಬುದ್ಧಿವಂತಿಕೆ ಸಾಸಿವೆ ಕಾಳಿನಷ್ಟು ಇರುವುದಿಲ್ಲ. ಕಾಪಿ ಎಡಿಟರ್‌ಗಳು ನಿರೂಪಣೆ ಬರೆದುಕೊಟ್ಟಿರುತ್ತಾರೆ. ಪರದೆಯ ಮೇಲೆ ಅದು ಬರುತ್ತದೆ. ಅದನ್ನು ನೋಡಿ ಓದುವುದಷ್ಟೇ ನಿರೂಪಕರ ಕೆಲಸ. ಹೀಗೆ ಬರೆದಿದ್ದನ್ನು ಸ್ಪಷ್ಟವಾಗಿ, ತಪ್ಪಿಲ್ಲದೆ, ಒಮ್ಮೆ ಬರವಣಿಗೆಯಲ್ಲಿ ತಪ್ಪಿದ್ದರೂ ಅದನ್ನು ಸರಿಪಡಿಸಿಕೊಂಡು ಓದುವವ ಉತ್ತಮ ನಿರೂಪಕನಾಗುತ್ತಾನೆ. ನಮ್ಮ ಕನ್ನಡದ ದುರಂತವೆಂದರೆ, ಎಷ್ಟೋ ನಿರೂಪಕರಿಗೆ ಕನ್ನಡ ಓದಲು ಬರುವುದಿಲ್ಲ. ಒತ್ತಕ್ಷರಗಳ ಕಥೆ ಹಾಳಾಗಲಿ, ಸರಳ ಕನ್ನಡವನ್ನು ತಪ್ಪು ಓದುತ್ತಾರೆ. ಕಾಪಿ ಎಡಿಟರ್ ತಪ್ಪು ಬರೆದುಕೊಟ್ಟಿದ್ದರೆ, ಅದನ್ನೇ ಓದಿ ಬರುತ್ತಾರೆ! ಸುದ್ದಿಯ ಜ್ಞಾನ, ಅದರ ಹಿನ್ನೆಲೆ ಏನು ಎಂದು ಹೆಚ್ಚಿನ ನಿರೂಪಕರಿಗೆ ಗೊತ್ತಿರುವುದಿಲ್ಲ. ಆದರೆ ದುರಂತ ನೋಡಿ, ಅವರೇ ಸ್ಟಾರ್‌ಗಳು!

ಖಂಡಿತ ಯಾರೂ ಸರ್ವಜ್ಞರಲ್ಲ. ಸ್ವತಃ ನಾನು ಕೂಡ ಒಂದೆರಡು ಸಲ ತಪ್ಪು ಮಾಡಿದ್ದೇನೆ. ಆದ್ರೆ ಒಂದು ಸಲ ಮಾಡಿದ ತಪ್ಪು ನನ್ನಿಂದ ಸಾಮಾನ್ಯವಾಗಿ ಮರುಕಳಿಸುವುದಿಲ್ಲ. ಅಷ್ಟರ ಮಟ್ಟಿಗಿನ ಎಚ್ಚರಿಕೆ ವಹಿಸುತ್ತೇನೆ. ಇದಕ್ಕೆ ಕಾರಣವೂ ಇದೆ. ನಾನು ವಿಕೆಯಲ್ಲಿದ್ದಾಗ ಮುಖ್ಯಸ್ಥರೊಬ್ಬರು ಒಂದು ಒಳ್ಳೇ ಮಾತು ಹೇಳಿದ್ದರು. ಪತ್ರಿಕೆ ಎಂಬುದು ಟ್ರೆಂಡ್ ಸೆಟ್ ಮಾಡುತ್ತದೆ. ಇನ್ನು ೧೦ ವರ್ಷದ ನಂತರ ಯಾವುದೋ ಪದಕ್ಕಾಗಿ ಒಬ್ಬ ಪತ್ರಿಕೆ ತೆಗೆಯುತ್ತಾನೆ. ನೀವು ತಪ್ಪು ಬರೆದಿದ್ದರೆ, ಅವ ಅದನ್ನೇ ಸರಿಯಿದೆ ಅಂತಾ ಸ್ವೀಕರಿಸುತ್ತಾನೆ. ಒಟ್ನಲ್ಲಿ ಒಂದು ಭಾಷೆಯನ್ನು ಹಾದಿ ತಪ್ಪಿಸಿದಂತೆ ಆಗುತ್ತದೆ ಅನ್ನುವ ಅವರ ಮಾತು ಇವತ್ತಿಗೂ ನನ್ನ ಕಿವಿಯಲ್ಲಿದೆ. ಹಾಗೆ ನೋಡಿದ್ರೆ ಬ್ಲಾಗ್‌ನಲ್ಲೇ ನನ್ನಿಂದ ಹೆಚ್ಚು ಅಕ್ಷರದೋಷಗಳಾಗುವುದು. ಇಲ್ಲಿ ಹೆಚ್ಚಾಗಿ ಆಡುಭಾಷೆ ಬಳುಸುವುದು ಅದಕ್ಕೆ ಕಾರಣ.

ಇಷ್ಟೆಲ್ಲದರ ನಡುವೆಯೂ ಇಲ್ಲಿ ಕೆಲಸ ಮಾಡುವುದು ಒಂದು ರೀತಿ ಮಜವಾದ ಅನುಭವ. ನಮ್ಮ ಕೆಲಸದ ವೇಗ ಗೊತ್ತಾಗುತ್ತದೆ. ಸೋಮಾರಿಗಳಾಗಿದ್ದವರು ಚುರುಕಾಗುತ್ತಾರೆ. ಆದ್ರೂ ಸದ್ಯಕ್ಕೆ ಕ್ರೀಡೆಯಲ್ಲಿ ಕಳೆದುಹೋಗಿರುವ ನಾನು, ಮೊದಲಿನಷ್ಟೇ ಸೋಮಾರಿತನ ಉಳಿಸಿಕೊಂಡಿದ್ದೆನೆ!!!

ಬೋಫೋರ್ಸ್, ಕಾಮನ್‌ವೆಲ್ತ್, ೨ಜಿ ಹಗರಣದಂಥ ಭ್ರಷ್ಟತೆಯ ಬ್ರಹ್ಮಾಂಡದಲ್ಲಿ ಮುಳುಗಿರುವ ಕಾಂಗ್ರೆಸ್‌ಗೆ ಅಣ್ಣಾ ಹಜಾರೆ ಬಾಯಿ ಮುಚ್ಚಿಸುವುದು ಅವಶ್ಯವಾಗಿದೆ. ಹೀಗಾಗಿಯೇ ಯುಪಿಎ ಮೈತ್ರಿಕೂಟ ಹಜಾರೆಯವರನ್ನು ಹೋರಾಟಕ್ಕಿಳಿಯುವ ಮೊದಲೇ ಬಂಧಿಸಿ, ವ್ಯವಸ್ಥಿತ ರೀತಿಯಲ್ಲಿ ಇಡೀ ಹೋರಾಟವನ್ನು ಹಳ್ಳ ಹಿಡಿಸುವ ಹುನ್ನಾರ ನಡೆಸಿದ್ದು. ಆದರೆ ಈ ಸಲ ಸರಕಾರದ ಲೆಕ್ಕಾಚಾರ  ತಲೆ ಕೆಳಗಾಗಿದೆ. ಹಜಾರೆ ತಮ್ಮ ಪಟ್ಟು ಸಡಿಲಗೊಳಿಸುವ ರೀತಿ ಕಾಣುತ್ತಿಲ್ಲ. ಜೊತೆಗೆ ದೇಶದಾದ್ಯಂತ ಸಹಸ್ರಾರು ಮಂದಿ ಹಜಾರೆ ಬೆಂಬಲಿಸಿ ಹೋರಾಟಕ್ಕೆ ಇಳಿದಿದ್ದಾರೆ.

ನಮ್ಮ ದೇಶದ ಬಹು ದೊಡ್ಡ ದುರಂತವದು. ಸಹಸ್ರಾರು ಜನ ಮೈದಾನಕ್ಕಿಳಿದು ಘೋಷಣೆ ಕೂಗುತ್ತಾರೆ ನಿಜ. ಆದರೆ ಯಾಕೆ ಅವರು ಮೈದಾನದಲ್ಲಿ ಇದ್ದಾರೆ ಎಂಬುದು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ! ಹೀಗಾಗಿ ವಾರ ಕಳೆಯುವುದರೊಳಗೆ ಹೋರಾಟದ ಕಿಚ್ಚು ಆರಿ  ಹೋಗುತ್ತದೆ. ಹೋರಾಟಗಾರರು ಚದುರಿ ಹೋಗುತ್ತಾರೆ. ಕೊನೆಗೆ ಅನಿವಾರ್ಯವಾಗಿ ಅಂಥ ಹೋರಾಟದ ಮುಂದಾಳತ್ವ ವಹಿಸಿದವರು ಶರಣಾಗುವ ಸ್ಥಿತಿ ಬರುತ್ತದೆ.

ಜನ್ ಲೋಕಪಾಲ್, ಅಂಥ ಹೋರಾಟವಾಗಬಾರದು. ಖಂಡಿತವಾಗಿಯೂ ವಾರ, ಹದಿನೈದು ದಿನಕ್ಕೆ ಮುಗಿಯುವ ಸತ್ಯಾಗ್ರಹವಲ್ಲವಿದು. ಹಜಾರೆ ಹೇಳಿದ ಹಾಗೆ ಇದನ್ನು ನಾವು ದ್ವಿತೀಯ ಸ್ವತಂತ್ರ ಸಂಗ್ರಾಮ ಎಂದು ಭಾವಿಸಬೇಕಾದ ಅನಿವಾರ್ಯತೆಯಿದೆ.

“ಜನ್ ಲೋಕಪಾಲ್” ಎಂಬುದು ಸದ್ಯಕ್ಕೆ ಒಂದು ಮಸೂದೆ. ಸಂಸತ್ತಿನ ಉಭಯ ಸದನಗಳಲ್ಲಿ ಮಂಡನೆಯಾಗಿ ಅಂಗೀಕಾರಗೊಂಡರೆ ಕಾಯ್ದೆಯಾಗುತ್ತದೆ. ಭ್ರಷ್ಟಾಚಾರ ವಿರೋಧಿ ಕಾನೂನು ರೂಪಿಸಲು ಸಿದ್ಧವಾಗಿರುವ ಮಸೂದೆಯೇ ಈ ಜನ್ ಲೋಕಪಾಲ್. ಸಂಸತ್ತಿನ ಮೇಲ್ಮನೆ ಹಾಗೂ ಕೆಳಮನೆಗಳಲ್ಲಿ ಅಂಗೀಕಾರಗೊಂಡರೆ, ಚುನಾವಣೆ ಆಯೋಗದಂತೆ “ಲೋಕಪಾಲ್” ಎಂಬ ಪ್ರತ್ಯೇಕ ಸ್ವತಂತ್ರ ಆಯೋಗ ತಲೆ ಎತ್ತುತ್ತದೆ.

ಇಂಥದ್ದೊಂದು   ಕಾನೂನಿಗಾಗಿ ೧೯೬೮ರಲ್ಲೇ  ಧ್ವನಿ ಎದ್ದಿತ್ತು. ಮುರಾರ್ಜಿ ದೇಸಾಯಿವರ ಸರಕಾರದಲ್ಲಿ ಕಾನೂನು ಮಂತ್ರಿಯಾಗಿದ್ದ ಶಾಂತಿಭೂಷಣ್, ಲೋಕಪಾಲ್‌ನ್ನು ರೂಪಿಸಿದವರು. ೧೯೬೮-೬೯ನೇ ಲೋಕಸಭೆ ಅಧಿವೇಶನದಲ್ಲಿ ಈ ಮಸೂದೆ ಅಂಗೀಕಾರವಾಗಿದ್ದು ನಿಜ. ಆದರೆ ರಾಜ್ಯಸಭೆ ಇದಕ್ಕೆ ಅಡ್ಡಗಾಲಾಯ್ತು. ಹೀಗಾಗಿ ಲೋಕಪಾಲ್ ಕನಸಾಗಿಯೇ ಉಳಿಯಿತು.

೧೯೭೧,೭೭,೮೫,೮೯,೯೬,೨೦೦೧,೨೦೦೫ ಮತ್ತು ೨೦೦೮ರಲ್ಲಿ ಪುನಃ  ಉಭಯ ಸದನಗಳಲ್ಲಿ ಈ ಮಸೂದೆ ಚರ್ಚೆಗೆ ಬಂದಿದೆ. ಆದಾಗ್ಯೂ ಅಂಗೀಕಾರವಾಗಲಿಲ್ಲ.

೨೦೧೦ರಲ್ಲಿ ಮತ್ತೆ ಈ ಕಾಯ್ದೆಗಾಗಿ ಧ್ವನಿ ಎದ್ದಿದ್ದು ನಿಜ. ಆಗ ಸರಕಾರ ಇದರ ಕರಡು ರಚನೆಗೆ ಮುಂದಾಯ್ತು. ೨೦೧೧ರಲ್ಲಿ ಗಾಂಧಿವಾದಿಯಾಗಿರುವ ಅಣ್ಣಾ ಹಜಾರೆ, ಈ ಮಸೂದೆ ಅಂಗೀಕಾರವಾಗಲೇ ಬೇಕು ಅಂತಾ ಉಪವಾಸ ಸತ್ಯಾಗ್ರಹ ಕುಳಿತರು. ಮಾಧ್ಯಮಗಳು ಹಾಗೂ ಸಹಸ್ರಾರು ಬೆಂಬಲಿಗರನ್ನು ಇದು ಆಕರ್ಷಿಸಿತು. ಬಾಬಾ ರಾಮ್‌ದೇವ್, ಸ್ವಾಮಿ ಅಗ್ನಿವೇಶ್, ರವಿಶಂಕರ್ ಗೂರೂಜಿ ಸೇರಿದಂತೆ ಅನೇಕರು ಅಣ್ಣಾಗೆ ಬೆಂಬಲವಾಗಿ ನಿಂತರು. ೪ ದಿನಗಳ ಉಪವಾಸದ ಬಳಿಕ ಮಸೂದೆಯನ್ನು ೨೦೧೧ರ ಮುಂಗಾರು ಅಧಿವೇಶನದಲ್ಲಿ ಮಂಡಿಸುವುದಾಗಿ ಮನ್‌ಮೋಹನ್ ಸಿಂಗ್ ಹೇಳಿಕೆ ನೀಡಿದರು. ಅದಕ್ಕೆ ಒಪ್ಪಿದ ಅಣ್ಣಾ ಆ.೧೬ ಡೆಡ್‌ಲೈನ್ ಕೊಟ್ಟರು. ಗಡುವು ಮುಗಿದ ಕಾರಣ ಅಣ್ಣಾ ಮತ್ತೆ ಬೀದಿಗಿಳಿದಿದ್ದಾರೆ.

ಸರಕಾರ ಹಾಗೂ ನಾಗರೀಕ ಸಮೂಹದ ದೃಷ್ಟಿಯನ್ನು ಒಟ್ಟುಗೂಡಿಸಿ ಮಸೂದೆಯ ಕರಡು ರಚಿಸುವ ಪ್ರಹಸನವೂ ನಡೆದಿದೆ. ಕ್ಯಾಬಿನೆಟ್‌ನ ೫ ಸಚಿವರು ಹಾಗೂ ಅಣ್ಣಾ ಬಳಗದ ೫ ಮಂದಿಯನ್ನು ಸೇರಿಸಿ ಒಂದು ಸಮಿತಿ ರಚಿಸಲು ಸರಕಾರ ಮುಂದಾಯ್ತು. ಸಮಿತಿ ರಚನೆಯೂ ಆಯ್ತು. ಆದರೆ ಇಲ್ಲಿ ಒಮ್ಮತ ಬರಲಿಲ್ಲ. ಸರಕಾರ ತನ್ನ ಪಟ್ಟು ಬಿಡಲಿಲ್ಲ.

ಈಗಿನ ಪ್ರಸ್ತಾಪದಂತೆ ಮಸೂದೆ ಅಂಗೀಕಾರಗೊಂಡರೆ, ರಾಜ್ಯದಲ್ಲಿ ಲೋಕಾಯುಕ್ತವಿರುವಂತೆ ಕೇಂದ್ರದಲ್ಲಿ ಲೋಕಪಾಲ್ ಆಯೋಗ ತಲೆ ಎತ್ತಲಿದೆ. ಸಂಪೂರ್ಣ ಸ್ವಾಯತ್ತತೆ ಪಡೆಯಲಿರುವ ಈ ಆಯೋಗ, ಕ್ಯಾಬಿನೆಟ್ ಕಾರ್ಯಾಲಯ ಹಾಗೂ ಚುನಾವಣಾ ಆಯೋಗದ ಮೇಲ್ವಿಚಾರಣೆಯಲ್ಲಿ ಇರುತ್ತದೆ. ಪರಿಣಾಮವಾಗಿ ಸರಕಾರ ಹಾಗೂ ಮಂತ್ರಿಗಳಿಂದ ಈ ಆಯೋಗ ಸ್ವತಂತ್ರವಾಗಿರುತ್ತದೆ.
ಆಯೋಗದ ಸದಸ್ಯರನ್ನು ನ್ಯಾಯಮೂರ್ತಿಗಳು, ಸ್ವಚ್ಛ ದಾಖಲೆ ಹೊಂದಿರುವ ಐಎಎಸ್ ಅಧಕಾರಿಗಳು, ಖಾಸಗಿ ನಾಗರೀಕರು ಮತ್ತು ಸಂವಿಧಾನಿಕ ಪ್ರಾಧಿಕಾರಗಳಿಂದ ಆಯ್ಕೆ ಮಾಡಬೇಕು. ಈ ಆಯ್ಕೆ ಪಾರದರ್ಶಕವಾಗಿರಬೇಕು. ಆಯ್ಕೆ ಸಮಿತಿ, ಅಂತಿಮ ಪಟ್ಟಿಯನ್ನು ವೀಡಿಯೊ ರೆಕಾರ್ಡ್ ಮಾಡಿ, ನಂತರ ಸಾರ್ವಜನಿಕರಿಗೆ ನೀಡಬೇಕು. ಸಿವಿಸಿಯಂಥ ಈಗಿರುವ ಭ್ರಷ್ಟಾಚಾರ ನಿಯಂತ್ರಣ ಅಂಗಗಳನ್ನು ಲೋಕಪಾಲ್‌ದೊಂದಿಗೆ ವೀಲಿನಗೊಳಿಸಬೇಕು. ಯಾವುದೇ ಅಧಿಕಾರಿಗಳು, ನ್ಯಾಯಮೂರ್ತಿಗಳು ಹಾಗೂ ರಾಜಕರಾಣಿಗಳನ್ನು ಯಾರ ಅನುಮತಿಯೂ ಇಲ್ಲದೇ ವಿಚಾರಣೆಗೆ ಒಳಪಡಿಸುವ, ಅವರ ಸಂಪತ್ತು ತನಿಖೆ ನಡೆಸುವ ಸ್ವತಂತ್ರ ಈ ಆಯೋಗಕ್ಕೆ ಇರುತ್ತದೆ.

೨೦೧೦ರಲ್ಲಿ ರಚಿತವಾದ ಕರಡು ಮಸೂದೆಗೂ, ೧೯೬೯ರ ಮೂಲ ಮಸೂದೆಗೂ ಸಾಕಷ್ಟು ವ್ಯತ್ಯಾಸಗಳಿವೆ. ಸಾರ್ವಜನಿಕರ ದೂರ ಅನುಸರಿಸಿ ದಾಳಿ ನಡೆಸುವ ಹಕ್ಕು ಲೋಕಪಾಲ್‌ಗೆ ಇಲ್ಲ. ರಾಜ್ಯಸಭೆ ಅಧ್ಯಕ್ಷರು ಅಥವಾ ಲೋಕಸಭೆ ಸ್ಪೀಕರ್‌ಗಳಿಂದ ಬಂದ ದೂರನ್ನು ಮಾತ್ರ ತನಿಖೆ ನಡೆಸಬಹುದು ಅನ್ನುತ್ತಿದೆ ೨೦೧೦ರ ಕರಡು. ಹಾಗಂದ ಮೇಲೆ ಖಂಡಿತವಾಗಿಯೂ ನಮಗೆ ಲೋಕಪಾಲ್ ಅಗತ್ಯವೇ ಇಲ್ಲ! ೧೯೬೯ರ ಮಸೂದೆ ಪ್ರಕಾರ, ಸಾರ್ವಜನಿಕ ದೂರುಗಳನ್ನೂ ತನಿಖೆ ನಡೆಸುವ ಹಕ್ಕು ಲೋಕಪಾಲ್‌ಗೆ ಇದೆ. ಇನ್ನೊಂದು ಪ್ರಮುಖ ಅಂಶವೆಂದರೆ, ೨೦೧೦ರ ಕರಡು ಅನ್ವಯ ಎಫ್‌ಐಆರ್ ದಾಖಲಿಸುವ ಹಕ್ಕು ಈ ಆಯೋಗಕ್ಕೆ ಇಲ್ಲ! ಯಾವುದೇ ಪೋಲೀರ್ಸ ಪವರ್ ಇರುವುದಿಲ್ಲ. ಸಿಬಿಐಗೂ ಲೋಕಪಾಲ್‌ಗೂ ಸಂಬಂಧವೇ ಇಲ್ಲ! ಈ ರೀತಿ ಅನುಕೂಲ ಸಿಂಧು ಕರಡನ್ನು ಸರಕಾರ ರಚಿಸಿಕೊಂಡಿದೆ. ಆಯೋಗವನ್ನು ತನ್ನ ಕೈಗೊಂಬೆಯಾಗಿಸಿಕೊಳ್ಳಲು ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಮಾಡಿದೆ. ಹೀಗಾದರೆ ಖಂಡಿತ ನಮಗೆ ಲೋಕಪಾಲ್ ಬೇಕಿಲ್ಲ.

ಇನ್ನೂ ಜೂನ್.೨೩,೨೦೧೧ರಂದು ಸರಕಾರ ಬಿಡುಗಡೆಗೊಳಿಸಿದ ಲೋಕಪಾಲ್ ಕರಡು ಪ್ರತಿಗೂ, ಮೂಲಕ್ಕೂ ತಾಳೆಯೇ ಇಲ್ಲ! ಪ್ರಧಾನ ಮಂತ್ರಿಯನ್ನು ಪ್ರಶ್ನಿಸುವ ಹಕ್ಕು ಲೋಕಪಾಲ್‌ಗೆ ಇಲ್ಲ ಅನ್ನುತ್ತಿದೆ ಸರಕಾರ! ಕಳೆದ ಮಾರ್ಚ್‌ನಿಂದ ಇದರ ವಿರುದ್ಧ ಹೋರಾಟ ಶುರುವಾಗಿದೆ. ಅಣ್ಣಾ ಜೊತೆಗೆ ಸಹಸ್ರಾರು ಮಂದಿ ಕೈಜೋಡಿಸಿದ್ದಾರೆ. ಕಪಿಲ್ ಸಿಬಾಲ್, ಪಿ.ಚಿದಂಬರಂರಂಥ ಎಡಬಡಂಗಿಗಳನ್ನು ಹೊಂದಿರುವ ಕರಡು ರಚನಾ ಸಮಿತಿಯಿಂದ ನಾವು ಏನನ್ನು ನೀರಿಕ್ಷಿಸಲು ಸಾಧ್ಯವಿಲ್ಲ. ಆ ಸಮಿತಿಯ ಸದಸ್ಯರಾಗಿರುವ ಶಾಂತಿಭೂಷಣ್, ಪ್ರಶಾಂತ್‌ಭೂಷಣ್, ಸಂತೋಷ್ ಹೆಗ್ಡೆಯವರಂಥ ಹಿರಿಯರು ಯಾರಿಗೂ ಮಣಿಯಬಾರದು. ರಾಜ್ಯ ಬಿಜೆಪಿಯ ಪ್ರಕರಣದಲ್ಲಿ ಈ ಹಿಂದೊಮ್ಮೆ ಇದ್ದಕ್ಕಿದ್ದಂತೆ ಅಡ್ವಾಣಿ ಅಣ್ಣನಾದಂತೆ, ಈ ಸಲ ಸಂತೋಷ್ ಹೆಗ್ಡೆ ಬಳಗಕ್ಕೆ ಮತ್ತೆ ಯಾರಾದ್ರು ಸಹೋದರರಾಗದಿದ್ದರೆ ಸಾಕು!

ಒತ್ತಡಕ್ಕೆ ಮಣಿದು ಜನಲೋಕಪಾಲ್ ಅಂಗೀಕಾರಕ್ಕೆ ಸರಕಾರ ಸಜ್ಜಾಗಬಹುದು. ಆದರೆ, ಅದರ ಹಿಂದೆ ಒಂದಷ್ಟು ಷರತ್ತುಗಳನ್ನು ಖಂಡಿತವಾಗಿಯೂ ವಿಧಿಸುತ್ತದೆ. ಲೋಕಾಯುಕ್ತದಂತೆ, ಲೋಕಪಾಲ್ ಆಯೋಗವನ್ನು ತನ್ನ ತೆಕ್ಕೆಯೊಳಗೆ ಇಟ್ಟುಕೊಳ್ಳಲು ಪ್ರಯತ್ನಿಸುತ್ತದೆ. ಮುಖ್ಯವಾಗಿ ರಾಜ್ಯಸಭೆ ಅಧ್ಯಕ್ಷ ಹಾಗೂ ಲೋಕಸಭೆಯ ಸ್ಪೀಕರ್ ನೀಡಿದ ದೂರುಗಳನ್ನು ಮಾತ್ರ ತನಿಖೆ ನಡೆಸುವ ಹಕ್ಕು ನೀಡಲು ಸರಕಾರ ಮುಂದಾಗಿದೆ. ಈ ಇಬ್ಬರೂ ಸರಕಾರದ ಕೈಗೊಂಬೆಗಳಾಗಿರುತ್ತಾರೆ. ಹೀಗಾಗಿ ಮಸೂದೆಯನ್ನು ಇಂಥ ದುರಂತದಿಂದ ತಪ್ಪಿಸುವುದು ನಮ್ಮ ಮುಂದಿರುವ ನೈಜ ಸವಾಲು…

ಮಾಧ್ಯಮ ಅಂದ್ರೆ ಜನಕ್ಕೆ ಒಂಥರ ಕುತೂಹಲ. ಪತ್ರಿಕೆಯಲ್ಲೋ, ಟಿವಿಯಲ್ಲೋ ಕೆಲ್ಸ ಮಾಡೊ ಮಂದಿ ಸಿಕ್ಕರಂತೂ ಕೆಲವರ ಪಾಲಿಗೆ ಹಬ್ಬ. ತಮ್ಮಲ್ಲಿರೋ ಎಲ್ಲ ಅನುಮಾನಗಳನ್ನು ಪರಿಹರಿಸಿಕೊಳ್ಳುತ್ತಾರೆ. ಆದ್ರೆ ಅದು ನಮ್ಮ ಪಾಲಿಗೆ ಎಷ್ಟೋ ಸಲ ಕಿರಿಕಿರಿ. ಅವ್ರ ಪ್ರಶ್ನೆಗಳಿಗೆ ಉತ್ತರಿಸುವುದು ಖಂಡಿತ ಬೇಸರದ ಸಂಗತಿಯಲ್ಲ. ಆದ್ರೆ ನಮ್ಮ ಉತ್ತರವನ್ನು ಅವ್ರಿಗೆ ಅರ್ಥ ಮಾಡಿಸೋದು ಇದೆಯಲ್ಲ, ಅದಕ್ಕಿಂತ ದೊಡ್ಡ ತಲೆನೋವು ಮತ್ತೊಂದಿಲ್ಲ. ಅನೇಕ ಬ್ಲಾಗ್ ಗೆಳೆಯರು ಸಿಕ್ಕಾಗಲೆಲ್ಲ ಅದೇ ಪ್ರಶ್ನೆ ಕೇಳ್ತಾರೆ. ಅವ್ರಿಗೆಲ್ಲ ಉತ್ತರ ಇಲ್ಲಿದೆ!

ಪತ್ರಿಕೆಯಲ್ಲಿ ಕೆಲ್ಸ ಮಾಡೋದು ಅಂದಾಕ್ಷಣ ಜನ ಕೇಳೋ ಮೊದಲ ಪ್ರಶ್ನೆಯೇ ನೀವು ದಿನ ಬರಿತೀರಾ? ೨ನೇ ಪ್ರಶ್ನೆ ಯಾವ ಅಂಕಣ ಬರುತ್ತೀರಾ ಮತ್ತು ಯಾವ ಪುಟದಲ್ಲಿ ಪ್ರಕಟವಾಗುತ್ತೆ? ೩ನೇ ಪ್ರಶ್ನೆ ಅಲ್ಲಿ ಏನು ಕೆಲಸವಿರುತ್ತೆ? ೪ನೇ ಪ್ರಶ್ನೆ ತುಂಬಾ ಮಜವಾಗಿರುತ್ತೆ. ಅದ್ನ ಆಮೇಲೆ ಹೇಳ್ತೀನಿ!

ಖಂಡಿತ ಪತ್ರಿಕೆಯಲ್ಲಿ ಕೆಲಸ ಮಾಡುವ ಒಂದಷ್ಟು ಮಂದಿ ದಿನ ಬರೆಯುತ್ತಾರೆ. ಹಾಗೂ ಮತ್ತೊಂದಷ್ಟು ಮಂದಿ ಯಾವತ್ತೂ ಬರೆಯಲ್ಲ! ಹೆಚ್ಚಾಗಿ ಎಲ್ಲ ದಿನಪತ್ರಿಕೆಗಳಲ್ಲೂ ಪುಟಗಳಿಗೆ ಅನ್ವಯವಾಗಿ ಸಿಬ್ಬಂದಿಗಳ ವಿಭಾಗಗಳಿರುತ್ತೆ. ನಗರ, ರಾಜ್ಯ, ದೇಶ/ವಿದೇಶ, ವಾಣಿಜ್ಯ, ಕ್ರೀಡೆ, ಸಂಪಾದಕೀಯ, ವಿಶೇಷ…ಇತ್ಯಾದಿ ಪುಟಗಳನ್ನು ನಾವು ನಿತ್ಯವೂ ಕಾಣುತ್ತೇವೆ. ಇದರ ಹೊರತಾಗಿ ಪುರವಣಿಗಳು. ಅದು ಲವಲವಿಕೆ, ಕೃಷಿ ಸಂಪದ, ಕರ್ನಾಟಕ ದರ್ಶನ…ಇತ್ಯಾದಿಗಳು. ಇದಕ್ಕೆ ತಕ್ಕಂತೆ ವಿಭಾಗಗಳಿರುತ್ತವೆ.

ಮುಖ್ಯವಾಗಿ ಜನರಲ್ ಡೆಸ್ಕ್ ಅಥವಾ ಏಜೆನ್ಸಿ. ಈ ವಿಭಾಗದ ಕೆಲಸ ಇಂಟರ್‌ನೆಟ್, ಪಿಟಿಐ, ಯುಎನ್‌ಐ ಮೊದಲಾದ ಏಜೇನ್ಸಿಗಳಿಂದ ಬರುವ ಸುದ್ದಿಯನ್ನು ಕನ್ನಡಕ್ಕೆ ಭಾಷಾಂತರಿಸುವುದು. ಪಿಟಿಐ, ಯುಎನ್‌ಐ ಮೊದಲಾದವು ನಿರಂತರವಾಗಿ ಸುದ್ದಿ ನೀಡ್ತಾ ಇರುತ್ತವೆ. ಇದನ್ನು ಪಡೆಯಲು ಚಂದಾದಾರಿಕೆ ಬೇಕು. ಪ್ರತಿ ಪತ್ರಿಕೆ ಪಿಟಿಐ, ಯುಎನ್‌ಐ ಹೊಂದಿರುತ್ತೆ. ಇನ್ನೂ ನೆಟ್‌ನಲ್ಲಿ ಐಬಿಎನ್, ಟೈಮ್ಸ್, ಎನ್‌ಡಿಟಿವಿ ಮೊದಲಾದವುಗಳ ವೈಬ್‌ಸೈಟ್ ಇವೆ. ಅವೆಲ್ಲ ದಿನದ ೨೪ ಗಂಟೆಗಳ ಸುದ್ದಿ ನೀಡುತ್ತಲೇ ಇರುತ್ತವೆ.

ಇದನ್ನೆಲ್ಲ ಜನರೆಲ್ ಡೆಸ್ಕ್‌ನ ಮುಖ್ಯಸ್ಥರು, ಉಪಸಂಪಾದಕರು/ಹಿರಿಯ ಉಪಸಂಪಾದಕರುಗಳಿಗೆ ಹಾಕುತ್ತಾರೆ. ಅವ್ರು ಅದನ್ನ ಭಾಷಾಂತರಿಸಿ ಸುದ್ದಿ ರೂಪದಲ್ಲಿ ಬರೆದುಕೊಡುತ್ತಾರೆ. ಹೀಗೆ ಬರೆಸಿದ ಸುದ್ದಿ ದೇಶ/ವಿದೇಶ ಅಥವಾ ಏಜೆನ್ಸಿ ಪುಟದಲ್ಲಿ ಪ್ರಕಟವಾಗುತ್ತೆ. ಉಪ ಸಂಪಾದಕರುಗಳು ಬರೆದ ಎಲ್ಲ ಸುದ್ದಿ ಪ್ರಕಟವಾಗುತ್ತೆ ಅನ್ನೋಕೆ ಸಾಧ್ಯವಿಲ್ಲ. ಸುದ್ದಿ ಪ್ರಕಟಣೆ ಜಾಹೀರಾತು ಆಧರಿಸಿರುತ್ತೆ. ಜಾಹೀರಾತು ಜಾಸ್ತಿ ಇದ್ದರೆ ಕಡಿಮೆ ಸುದ್ದಿಗಳು. ಇಲ್ಲ ಅಂದ್ರೆ ಜಾಸ್ತಿ ಸುದ್ದಿ. ಎಲ್ಲ ಪ್ರಮುಖ ಸುದ್ದಿಗಳನ್ನು ಬರೆಸಿರುತ್ತಾರೆ. ಪುಟದ ಜಾಗ ಆಧರಿಸಿ ನಂತರ ಸುದ್ದಿ ಪರಿಷ್ಕರಣೆ ಆಗುತ್ತೆ. ಒಬ್ಬ ಉಪಸಂಪಾದಕ ಸಾಮಾನ್ಯವಾಗಿ ದಿನಕ್ಕೆ ೬-೮ ಸುದ್ದಿ ಭಾಷಾಂತರ ಮಾಡುತ್ತಾನೆ. ಅಂದಹಾಗೆ ಹೀಗೆ ಬರೆದ ಸುದ್ದಿಗಳ ಜೊತೆ ಅವರ ಹೆಸ್ರು ಬರಲ್ಲ.

ಇನ್ನು ವರದಿಗಾರರ ತಂಡ ದಿನದ ಪ್ರಮುಖ ಬೆಳವಣಿಗೆಗಳ(ರಾಜಕೀಯ, ಸಾಮಾನ್ಯ, ಸಾಹಿತ್ಯ…)ಸುದ್ದಿಯನ್ನು ತಂದು ರಾಶಿ ಹಾಕುತ್ತೆ. ಇಲ್ಲೂ ಹಾಗೆ ವರದಿಗಾರರಿಗೆ ಮುಖ್ಯ ವರದಿಗಾರರು ಅಸೈನ್ ಮಾಡುತ್ತಾರೆ. ಇದರ ಹೊರತಾಗಿ ವರದಿಗಾರರೇ ಸ್ವಯಂ ಇಚ್ಛೆಯಿಂದ ಮಾಡುವ ವಿಶೇಷ ವರದಿಗಳು. ಅಸೈನ್ ಮಾಡಿದ ವರದಿಗಳಿಗೆ ಹೆಸರು ಬರುಲ್ಲ. ವಿಶೇಷ ವರದಿಯೊಂದಿಗೆ ವರದಿಗಾರನ ಹೆಸರು ಪ್ರಕಟವಾಗುತ್ತೆ.

ಇನ್ನೂ ವರದಿಗಾರರು ಮಾಡಿ ತಂದ ಸುದ್ದಿಗಳು ನೇರವಾಗಿ ಪುಟದಲ್ಲಿ ಪ್ರಕಟವಾಗುಲ್ಲ. ಇದನ್ನು ಪರಿಷ್ಕರಿಸಲು ಒಂದು ಉಪ/ಹಿರಿಯ ಉಪ ಸಂಪಾದಕರ ತಂಡ ಇರುತ್ತೆ. ಇದನ್ನು ಸಾಮಾನ್ಯವಾಗಿ ಸ್ಟೇಟ್ ಡೆಸ್ಕ್ ಅಂತಾರೆ. ದಿನದ ಪ್ರಮುಖ ರಾಜಕೀಯ ವರದಿಗಳು, ನಗರಕ್ಕೆ ಸಂಬಂಧಿತ ಮಹತ್ವದ ವರದಿಗಳು ಎಡಿಟ್ ಆಗುವುದು ಈ ವಿಭಾಗದಲ್ಲಿ. ಹೀಗಾಗಿ ಇಲ್ಲಿ ಹಿರಿಯ ಉಪಸಂಪಾದಕರು ಇರುತ್ತಾರೆ. ಇಲ್ಲಿನ ಸುದ್ದಿಗಳು ನಗರ ಮತ್ತು ರಾಜ್ಯ ಪುಟದಲ್ಲಿ ಬಳಕೆಯಾಗುತ್ತೆ. ದಿನಕ್ಕೆ ೩೦-೪೦ ವರದಿ ಬಂದಿರುತ್ತೆ. ಎಲ್ಲವೂ ಪ್ರಕಟವಾಗುಲ್ಲ. ಇಲ್ಲೂ ಆಯ್ಕೆ, ಕತ್ತರಿ ಪ್ರಯೋಗಗಳು ನಡೆಯುತ್ತವೆ.

ಎಲ್ಲ ಪ್ರತಿಕೆಗಳೂ ಮಂಗಳೂರು, ಹುಬ್ಬಳಿ, ಶಿವಮೊಗ್ಗ ಇತ್ಯಾದಿ ಜಿಲ್ಲೆಗಳಲ್ಲಿ ಆವೃತ್ತಿ ಹೊಂದಿವೆ. ಇದರ ಹೊರತಾಗಿ ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ವರದಿಗಾರರನ್ನು ಹೊಂದಿರುತ್ತವೆ. ಇಲ್ಲಿನ ಪ್ರಮುಖ ಸುದ್ದಿಗಳನ್ನು ಆಯಾ ಆವೃತ್ತಿಯವರು ಮುಖ್ಯ ಕಚೇರಿಗೆ(ಬೆಂಗಳೂರಿಗೆ)ಕಳುಹಿಸುತ್ತಾರೆ. ದಿನದ ಪ್ರಮುಖ ಸುದ್ದಿಗಳ ಪಟ್ಟಿ ಎಲ್ಲ ಜಿಲ್ಲೆಗಳಿಂದ ಬೆಳಿಗ್ಗೆ ಬರುತ್ತೆ. ಮತ್ತೆ ಪುನಃ ಮಧ್ಯಾಹ್ನ ಹಾಗೂ ಸಂಜೆ ಬರುತ್ತೆ. ಇಲ್ಲಿನ ಪ್ರಮುಖ ಸುದ್ದಿಗಳ ಆಯ್ಕೆ ಮತ್ತು ಎಡಿಟ್ ಜವಬ್ದಾರಿ ಬ್ಯೂರೊ ಡೆಸ್ಕ್‌ನದ್ದು. ಇದಕ್ಕೆ ಒಬ್ಬ ಸಮನ್ವಯಕಾರ ಕೂಡ ಇರ್ತಾನೆ. ಇಲ್ಲಿನ ಸುದ್ದಿಗಳು ರಾಜ್ಯ ಪುಟದಲ್ಲಿ ಹೊಗುತ್ತೆ.

ಇನ್ನೂ ಗ್ರಾಮಾಂತರ, ಕ್ರೀಡೆ, ವಾಣಿಜ್ಯ, ವಿಶೇಷಕ್ಕೆ ಪ್ರತ್ಯೇಕ ತಂಡವಿರುತ್ತೆ. ಸಂಪಾದಕೀಯ ಮತ್ತು ಅದರ ಪಕ್ಕದ ಪುಟಕ್ಕೆ ಪ್ರತ್ಯೇಕ ತಂಡವಿರುತ್ತೆ. ಸಂಪಾದಕೀಯದ ಎದುರಿನ ಪುಟವನ್ನು ಒಪೆಡ್ ಎನ್ನಲಾಗುತ್ತೆ. ಈ ಪುಟವನ್ನು ಬೇರೆ-ಬೇರೆ ಪತ್ರಿಕೆಗಳು ಬೇರೆ ರೀತಿಯಲ್ಲಿ ಬಳಸಿಕೊಳ್ಳುತ್ತವೆ.
ಇದೆಲ್ಲ ಪ್ರತಿನಿತ್ಯದ ಪುಟಗಳ ಕಥೆ.

ಪುರವಣಿಗಳಿಗೇ ಪ್ರತ್ಯೇಕ ತಂಡ. ವಾರದ ದಿನಗಳಲ್ಲಿ ಪುರವಣಿ ಪುಟ ತುಂಬಿಸುವುದು ಆ ವಿಭಾಗಗಳ ಕೆಲಸ. ಅಲ್ಲೂ ಕೃಷಿಗೆ ಬೇರೆ, ಸಾಪ್ತಾಹಿಕಕ್ಕೆ ಬೇರೆ ಅಂತಾ ಭಿನ್ನ ತಂಡಗಳು ಇರುತ್ತವೆ. ಪ್ರತಿ ಸುದ್ದಿಮನೆಯಲ್ಲಿ ದಿನ ಸಂಜೆ ೬ ಗಂಟೆಗೆ ಹೊತ್ತಿಗೆ ಒಂದು ಸಭೆ ನಡೆಯುತ್ತೆ. ಅದ್ರಲ್ಲಿ ಪ್ರಧಾನ ಸಂಪಾದಕರು, ಸುದ್ದಿ ಸಂಪಾದಕರು ಹಾಗೂ ಎಲ್ಲ ವಿಭಾಗಗಳ ಮುಖ್ಯಸ್ಥರು ಭಾಗವಹಿಸುತ್ತಾರೆ. ದಿನದ ಪ್ರಮುಖ ಸುದ್ದಿಗಳ ಕುರಿತು ಚರ್ಚೆ ನಡೆಸುತ್ತಾರೆ. ನಂತರ ಮುಖಪುಟಕ್ಕೆ ಹೋಗುವ ಸುದ್ದಿಗಳನ್ನು ಅಲ್ಲಿ ನಿರ್ಧರಿಸುತ್ತಾರೆ. ಅದೇ ಹೊತ್ತಿಗೆ ಜಾಹೀರಾತು ವಿಭಾಗದವರು ಕರಡು ನೀಡುತ್ತಾರೆ. ಮುಖ ಪುಟದ ಸುದ್ದಿಗಳ ಹೊರತಾಗಿ ಇತರೆ ಪುಟದಲ್ಲಿ ಹೋಗಬೇಕಾದ ಪ್ರಮುಖ ಸುದ್ದಿಗಳ ನಿರ್ಧಾರವೂ ಅಲ್ಲೆ ಆಗುವುದು.

ಸುದ್ದಿಮನೆಯಲ್ಲಿ ಪ್ರತಿ ನಿತ್ಯದ ಪುಟಗಳ ವಿನ್ಯಾಸ ಶುರುವಾಗುವುದು ಸಂಜೆ ೭ರ ನಂತರ. ವಿಭಾಗದ ಮುಖ್ಯಸ್ಥರು ಇಂತಿಂಥ ಸುದ್ದಿಗಳು ಪುಟದಲ್ಲಿ ಹೋಗಬೇಕು ಎಂದು ಪಟ್ಟಿ ಕೊಡುತ್ತಾರೆ. ಅದನ್ನು ಆಧರಿಸಿ ಉಪ/ಹಿರಿಯ ಉಪಸಂಪಾದಕ ಪುಟ ವಿನ್ಯಾಸ ಮಾಡಿಸಲು ಕೂರುತ್ತಾನೆ. ಕೆಲ ಪತ್ರಿಕೆಗಳಲ್ಲಿ ಪ್ರತಿ ಪುಟಕ್ಕೂ ವಿನ್ಯಾಸಕಾರರಿರುತ್ತಾರೆ. ಇನ್ನು ಕೆಲವು ಕಡೆ ಉಪಸಂಪಾದಕರೇ ಪುಟ ವಿನ್ಯಾಸವನ್ನೂ ಮಾಡಿಕೊಳ್ಳುತ್ತಾರೆ. ಸಿದ್ಧವಾದ ಸುದ್ದಿಗಳನ್ನು ಪುಟಕ್ಕೆ ಕೂರಿಸುತ್ತಾರೆ. ಸುದ್ದಿಯನ್ನು ಕುಗ್ಗಿಸುವ, ಹಿಗ್ಗಿಸುವ ಕಸರತ್ತು ಇಲ್ಲಿ ನಡೆಯುತ್ತೆ. ಇಲ್ಲಿ ಸಿದ್ಧವಾದ ಪುಟವನ್ನು ವಿಭಾಗ ಮುಖ್ಯಸ್ಥರು, ನಂತರ ಸುದ್ದಿ ಸಂಪಾದಕರು ನೋಡುತ್ತಾರೆ. ಪುರುಸೊತ್ತು ಇದ್ದರೆ ಸಂಪಾದಕರೂ ಕಣ್ಣಾಡಿಸುತ್ತಾರೆ. ಎಲ್ಲ ಮುಗಿದು ಸುಮಾರು ರಾತ್ರಿ ೯.೩೦ ಹೊತ್ತಿಗೆ ಪುಟ ಪ್ರಿಂಟ್‌ಗೆ ಹೋಗುತ್ತೆ.

ಮುಖಪುಟವನ್ನು ಕೆಲವು ಕಡೆ ಸಂಪಾದಕರು ಖುದ್ದು ನಿಂತು ವಿನ್ಯಾಸ ಮಾಡಿಸುತ್ತಾರೆ. ಇನ್ನು ಕೆಲವೆಡೆ ಸುದ್ದಿ ಸಂಪಾದಕರು ನೋಡಿಕೊಳ್ಳುತ್ತಾರೆ. ೬ ಗಂಟೆಯ ಸಭೆಯ ನಂತರ ಬಂದ ಪ್ರಮುಖ ಸುದ್ದಿಗಳನ್ನು ವಿಭಾಗ ಮುಖ್ಯಸ್ಥರು, ಸುದ್ದಿ ಸಂಪಾದಕರು ಅವಲೋಕಿಸಿ ನಿರ್ಧರಿಸುತ್ತಾರೆ. ಎಲ್ಲ ವಿಭಾಗಳ ಅವಲೋಕಿತ ಪ್ರಮುಖ ಸುದ್ದಿ ಮುಖಪುಟವನ್ನು ನಿರ್ಧಾರ ಮಾಡುತ್ತೆ. ನಗರ/ ಗ್ರಾಮಾಂತರ ಅಂತಾ ೨ ಪ್ರತ್ಯೇಕ ಆವೃತ್ತಿ. ಗ್ರಾಮಾಂತರ ಆವೃತ್ತಿ ೯-೯.೩೦ ಪ್ರಿಂಟ್‌ಗೆ ಹೋಗುತ್ತೆ. ನಂತರದ ಪ್ರಮುಖ ಸುದ್ದಿಗಳ ಅಪ್‌ಡೇಟ್‌ನೊಂದಿಗೆ ನಗರದ ಆವೃತ್ತಿ ರಾತ್ರಿ ೧೨-೧ ಗಂಟೆ ಹೊತ್ತಿಗೆ ಪ್ರಿಂಟ್ ಹೋಗುತ್ತೆ. ಇದು ಪತ್ರಿಕೆ ಅವಲಂಬಿಸಿ ಇರುತ್ತೆ. ಹೀಗಾಗಿಯೇ ಎಷ್ಟೋ ಸಲ ಪ್ರಮುಖ ಸುದ್ದಿಗಳು ನಗರದಲ್ಲಿ ಮಾತ್ರ ಬರುವುದು.
ಇಷ್ಟಾದ್ರು ನಿಮ್ಮ ಅನುಮಾನಗಳು ಬಗೆಹರಿದಿಲ್ಲ ಅಂತಾ ಗೊತ್ತು. ಇಲ್ಲಿ ಎಲ್ಲರೂ ಯಾಕೆ ಅಕಂಣಕಾರರು ಆಗಿರುವುದಿಲ್ಲ, ಸಾಮಾನ್ಯನೊಬ್ಬ ಬರೆದ ಬರಹಗಳು ಯಾಕೆ ಪ್ರಕಟವಾಗುವುದಿಲ್ಲ ಇತ್ಯಾದಿಗಳನ್ನು ಇನ್ನೊಂದು ಸಲ ನೋಡೋಣ…

Follow

Get every new post delivered to your Inbox.